ಬೆಂಗಳೂರು : ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇಂದು ಭಾರತೀಯ ಚಿತ್ರರಂಗದ 'ನ್ಯಾಷನಲ್ ಕ್ರಷ್'. ಕನ್ನಡದ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇವರು, ಇಂದು ಬಾಲಿವುಡ್‌ವರೆಗೂ ಬೆಳೆದು ನಿಂತಿದ್ದಾರೆ. ಆದರೆ, ಈ ಯಶಸ್ಸಿನ ಪಯಣದ ಆರಂಭದಲ್ಲಿ ರಶ್ಮಿಕಾ ಅವರಲ್ಲಿ ಆತ್ಮವಿಶ್ವಾಸದ ಕೊರತೆಯಿತ್ತು. ತಮಗೆ ಸಿಗುತ್ತಿರುವ ಅವಕಾಶಗಳು ಕೇವಲ 'ಅದೃಷ್ಟ' ಎಂದು ಅವರು ಭಾವಿಸಿದ್ದರು. ಇಂತಹ ಸಂದರ್ಭದಲ್ಲಿ ಅವರಿಗೆ ಮಾರ್ಗದರ್ಶನ ನೀಡಿ, ಅವರೊಳಗಿನ ನೈಜ ಪ್ರತಿಭೆಯನ್ನು ಗುರುತಿಸಿದ್ದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ .
ಇತ್ತೀಚಿನ ಸಂದರ್ಶನವೊಂದರಲ್ಲಿ ರಶ್ಮಿಕಾ ಈ ವಿಚಾರವನ್ನು ಅತ್ಯಂತ ಭಾವುಕರಾಗಿ ಹಂಚಿಕೊಂಡಿದ್ದಾರೆ. 'ಅಂಜನಿ ಪುತ್ರ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಪುನೀತ್ ಅವರು ರಶ್ಮಿಕಾ ಅವರ ಶ್ರಮ ಮತ್ತು ನಟನಾ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ರಶ್ಮಿಕಾ ತಮ್ಮ ಸಾಮರ್ಥ್ಯದ ಬಗ್ಗೆ ಗೊಂದಲದಲ್ಲಿದ್ದಾಗ, ಅಪ್ಪು ಅವರು ನೀಡಿದ ಆ ಒಂದು ಕಿವಿಮಾತು ಇಡೀ ವೃತ್ತಿಜೀವನಕ್ಕೆ ತಿರುವು ನೀಡಿತು.
"ನಿನ್ನ ಪ್ರತಿಭೆಯ ಮೇಲೆ ನಂಬಿಕೆ ಇಡು, ಕೆಲಸವನ್ನು ಗಂಭೀರವಾಗಿ ಪರಿಗಣಿಸು ಮತ್ತು ಯಾವುದಕ್ಕೂ ಹಿಂಜರಿಯಬೇಡ" ಎಂದು ಪುನೀತ್ ಹೇಳಿದ್ದರು.
ನನಗಿಂತ ಮೊದಲೇ ನನ್ನಲ್ಲಿದ್ದ ಶಕ್ತಿಯನ್ನು ಅಪ್ಪು ಗುರುತಿಸಿದ್ದರು ಎಂದು ರಶ್ಮಿಕಾ ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಅವರ ಪ್ರೋತ್ಸಾಹವೇ ರಶ್ಮಿಕಾ ಅವರಿಗೆ ರಿಸ್ಕ್ ತೆಗೆದುಕೊಳ್ಳುವ ಮತ್ತು ಪರಭಾಷಾ ಚಿತ್ರರಂಗಕ್ಕೆ ಕಾಲಿಡುವ ಧೈರ್ಯ ನೀಡಿತು. ಇದರ ಫಲವಾಗಿಯೇ ಅವರು ತೆಲುಗಿನ ಗೀತಾ ಗೋವಿಂದಂ ,ಪುಷ್ಪ ಹಾಗೂ ಹಿಂದಿಯ ಸಿನಿಮಾಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು.
ಕೇವಲ ಸಹ-ನಟನಾಗಿ ಉಳಿಯದೆ, ಒಬ್ಬ ಮಾರ್ಗದರ್ಶಕನಾಗಿ ಅಪ್ಪು ನೀಡಿದ ಆ ದೃಢವಾದ ನಂಬಿಕೆಯೇ ಇಂದಿನ ರಶ್ಮಿಕಾ ಮಂದಣ್ಣ ಅವರ ಯಶಸ್ಸಿನ ಹಿಂದಿನ ಗುಟ್ಟು. ಅಪ್ಪು ಅವರ ಆ ಸರಳ ಮಾತುಗಳು ಒಬ್ಬ ಸಾಮಾನ್ಯ ನಟಿಯನ್ನು ಅಸಾಮಾನ್ಯ ಎತ್ತರಕ್ಕೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂಬುದು ಅಕ್ಷರಶಃ ಸತ್ಯ.
PublicNext
29/04/2026 12:51 pm