ನವಿ ಮುಂಬೈ: ಬೇಸಿಗೆಯ ಬಿಸಿಲಿಗೆ ತಂಪು ನೀಡಬೇಕಿದ್ದ ಕಲ್ಲಂಗಡಿ ಹಣ್ಣು ಮುಂಬೈನ ಒಂದು ಕುಟುಂಬದ ಪಾಲಿಗೆ ಯಮನಂತೆ ಬಂದೆರಗಿದೆ. ಕಲ್ಲಂಗಡಿ ಸೇವಿಸಿದ ಕೆಲವೇ ಗಂಟೆಗಳಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಬೆನ್ನಲ್ಲೇ, ಮಾರುಕಟ್ಟೆಯಲ್ಲಿ ಈ ಹಣ್ಣಿನ ಬೇಡಿಕೆ ಪಾತಾಳಕ್ಕೆ ಕುಸಿದಿದೆ.
ದಕ್ಷಿಣ ಮುಂಬೈನ ನಿವಾಸಿ ಅಬ್ದುಲ್ಲಾ ದೊಕಾಡಿಯಾ (40), ಅವರ ಪತ್ನಿ ನಸ್ರೀನ್ (35), ಮತ್ತು ಪುತ್ರಿಯರಾದ ಆಯೇಷಾ (16) ಹಾಗೂ ಜೈನಾಬ್ (13) ಶನಿವಾರ ರಾತ್ರಿ ತಮ್ಮ ಮನೆಯಲ್ಲಿ ನಡೆದ ಔತಣಕೂಟದ ಬಳಿಕ ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದರು. ಹಣ್ಣು ತಿಂದ ಕೆಲವೇ ಗಂಟೆಗಳಲ್ಲಿ ಕುಟುಂಬದ ಎಲ್ಲರಿಗೂ ತೀವ್ರ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದೆ. ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ನಾಲ್ವರೂ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಿವಿಜ್ಞಾನ ತಂಡವು ಅಂದು ರಾತ್ರಿ ಸೇವಿಸಿದ್ದ ಚಿಕನ್ ಪಲಾವ್, ಕಲ್ಲಂಗಡಿ ಮತ್ತು ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ಇದು 'ಫುಡ್ ಪಾಯಿಸನಿಂಗ್' (ಆಹಾರ ವಿಷಪೂರಿತ) ಪ್ರಕರಣ ಎಂದು ಶಂಕಿಸಲಾಗಿದೆ. ಅಂದು ರಾತ್ರಿ ಔತಣಕೂಟಕ್ಕೆ ಬಂದಿದ್ದ ಐವರು ಅತಿಥಿಗಳು ಕೂಡ ಪಲಾವ್ ಸೇವಿಸಿದ್ದರು, ಆದರೆ ಅವರು ಕಲ್ಲಂಗಡಿ ತಿಂದಿರಲಿಲ್ಲ. ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿಲ್ಲದಿರುವುದು ಕಲ್ಲಂಗಡಿ ಹಣ್ಣಿನ ಮೇಲಿನ ಸಂಶಯವನ್ನು ಹೆಚ್ಚಿಸಿದೆ.
ಈ ದುರಂತ ಸುದ್ದಿಯ ಪ್ರಭಾವ ನವಿ ಮುಂಬೈನ ಎಪಿಎಂಸಿ (APMC) ಮಾರುಕಟ್ಟೆಯ ಮೇಲೆ ಭಾರಿ ಹೊಡೆತ ನೀಡಿದೆ. ಈ ಹಿಂದೆ ಕೆ.ಜಿ.ಗೆ 10 ರಿಂದ 35 ರೂಪಾಯಿ ಇದ್ದ ಸಗಟು ದರ, ಈಗ ಕೇವಲ 7 ರೂಪಾಯಿಗೆ ಕುಸಿದಿದೆ. ಏಷ್ಯಾದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಇಲ್ಲಿ ಗ್ರಾಹಕರು ಕಲ್ಲಂಗಡಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಟನ್ ಗಟ್ಟಲೆ ಹಣ್ಣುಗಳು ಕೊಳೆಯುತ್ತಿದ್ದು, ವ್ಯಾಪಾರಿಗಳು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ.
ಪೊಲೀಸರು ಸದ್ಯ ಅಬ್ದುಲ್ಲಾ ಅವರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದ್ದು, ಇದು ಕೇವಲ ಆಹಾರ ವಿಷಪೂರಿತ ಘಟನೆಯೇ ಅಥವಾ ಆರ್ಥಿಕ ಸಂಕಷ್ಟದಿಂದ ನಡೆದ ಆತ್ಮಹತ್ಯೆಯೇ ಎಂಬ ಕೋನದಲ್ಲೂ ತನಿಖೆ ನಡೆಸುತ್ತಿದ್ದಾರೆ.
PublicNext
29/04/2026 09:49 pm