ಶಿವಮೊಗ್ಗ : ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಗ್ರಾಮದಲ್ಲಿ ದಿನಾಂಕ 15.04.2026ರಂದು ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಎಸ್.ಜಿ.ಎಂ ನೇತ್ರ ಭಂಡಾರ ಹಾಗೂ ಸಂಶೋಧನಾ ಪ್ರತಿಷ್ಠಾನದ 24ನೇ ನೂತನ ದೃಷ್ಟಿ ಕೇಂದ್ರವನ್ನು ಉದ್ಘಾಟಿಸಲಾಯಿತು.
ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯು ಉತ್ತರ ಕರ್ನಾಟಕದ ಪ್ರಮುಖ ನೇತ್ರ ಚಿಕಿತ್ಸಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, 1967ರಲ್ಲಿ ಪದ್ಮಶ್ರೀ ಡಾ. ಎಂ.ಎಂ. ಜೋಶಿ ಸ್ಥಾಪಿಸಿದರು. ಇದು ಅತ್ಯಾಧುನಿಕ ತಂತ್ರಜ್ಞಾನದಿಂದ ಸಮಗ್ರ ಕಣ್ಣಿನ ಆರೈಕೆ, ಶಿಕ್ಷಣ ಹಾಗೂ ಸೇವೆಗಳನ್ನು ಒದಗಿಸುತ್ತದೆ.
ಎಸ್.ಜಿ.ಎಂ ನೇತ್ರ ಭಂಡಾರ ಹಾಗೂ ಸಂಶೋಧನಾ ಪ್ರತಿಷ್ಠಾನದ ಮೂಲಕ ಉಚಿತ ಕಣ್ಣಿನ ತಪಾಸಣೆ ಶಿಬಿರಗಳನ್ನು ಹಾಗೂ ಶಸ್ತ್ರಚಿಕಿತ್ಸೆಗಳ ಮೂಲಕ ಲಕ್ಷಾಂತರ ಬಡಜನರಿಗೆ ಸಹಾಯ ಮಾಡುತ್ತಾಬಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ದೃಷ್ಟಿ ಕೇಂದ್ರಗಳ ಮೂಲಕ ಅನಗತ್ಯ ಅಂಧತ್ವ ನಿವಾರಣೆ ಹಾಗೂ ಆರೋಗ್ಯ ಜಾಗೃತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಮನ್ನಿರಂಜನ ಘನಲಿಂಗ ಚನ್ನಬಸವ ಅಮರೇಶ್ವರ ಸ್ವಾಮೀಜಿ (ಸಮಾಧಾನ ಮಠ, ಬಂಕಸಾಣ) ಹಾಗೂ ಶ್ರೀ ನಿರಂಜನ ಪ್ರಣವ ಸ್ವರೂಪಿ ಮಹಾಂತ ಸ್ವಾಮೀಜಿ (ವಿರಕ್ತಮಠ, ಜಡೆ) ದಿವ್ಯ ಸಾನಿಧ್ಯ ವಹಿಸಿ ಕೇಂದ್ರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಿರಸಿಯ ಹಿರಿಯ ನೇತ್ರ ತಜ್ಞರು ಹಾಗೂ ಕರ್ನಾಟಕ ರಾಜ್ಯ ನೇತ್ರ ತಜ್ಞರ ಸಂಘದ ಅಧ್ಯಕ್ಷರಾದ ಎಂ.ಎಂ. ಜೋಶಿ ಗಣೇಶ ನೇತ್ರಾಲಯ, ಶಿರಸಿಯ ಡಾ. ಶಿವರಾಮ ಕೆ.ವಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು. ಜೊತೆಗೆ ಎಂ.ಎಂ. ಜೋಶಿ ಗಣೇಶ ನೇತ್ರಾಲಯ, ಶಿರಸಿಯ ಗ್ಲಾಕೋಮಾ ತಜ್ಞೆ ಡಾ. ತನುಶ್ರೀ ಹೆಗಡೆ ಅವರು ಸಹ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದೃಷ್ಟಿ ಕೇಂದ್ರದ ಉದ್ದೇಶ ಮತ್ತು ಸೇವೆಗಳ ಕುರಿತು ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಕುತುಬುದ್ದೀನ್ ಮುಲ್ಲಾ ಅವರು ವಿವರವಾದ ಮಾಹಿತಿ ನೀಡಿದರು.
ಶಿಬಿರದ ಅಂಗವಾಗಿ ಭಾಗವಹಿಸಿದವರಿಗೆ ಉಚಿತ ನೇತ್ರ ತಪಾಸಣೆ ನಡೆಸಲಾಗಿದ್ದು, ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ನೂರಾರು ಜನರು ಶಿಬಿರದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
PublicNext
30/04/2026 06:06 pm