ಶಿವಮೊಗ್ಗ : ಮಲೆನಾಡು ಭಾಗಗಳಾದ ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಕ್ಯಾಸನೂರು ಅರಣ್ಯ ಕಾಯಿಲೆ ಪ್ರಕರಣಗಳು ವರದಿಯಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ.ಎಸ್.ನಟರಾಜ್ ತಿಳಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಅರಳಸುರುಳಿ, ಮೇಗರವಳ್ಳಿ, ಕಟಗಾರು, ಹಾರೋಗುಳಿಗೆ, ಯೋಗಿಮಠ, ಮಾಳೂರು, ಬೆಟ್ಟಬಸವಾನಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿ, ಹೊಸನಗರ ತಾಲೂಕಿನ ಸೊನಲೆ, ಹುಂಚ, ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿ ಹಾಗೂ ಸಾಗರ ತಾಲೂಕಿನ ತಾಳಗುಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ತಲವಾಟ ಗ್ರಾ.ಪಂ. ವ್ಯಾಪ್ತಿಯ ಹಿರೇಮನೆ, ಮಂಜಿನಕಾನು ಗ್ರಾಮಗಳಲ್ಲಿ ಕೆಎಫ್‌ಡಿ ಪ್ರಕರಣಗಳು ವರದಿಯಾಗುತ್ತಿದ್ದು, ಈ ಭಾಗಗಳಲ್ಲಿ ಈಗಾಗಲೇ ವ್ಯಾಪಕ ಮುಂಜಾಗ್ರತಾ ಕ್ರಮ ವಹಿಸಲು ಜನರಿಗೆ ಆರೋಗ್ಯ ಶಿಕ್ಷಣ ಹಾಗೂ ಮಾಹಿತಿ ನೀಡಲಾಗಿದೆ.
ಜ್ವರ, ಮೈಕೈ ನೋವು, ತಲೆನೋವು ಕಾಣಿಸಿಕೊಂಡ ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಚಿಕಿತ್ಸೆ ಪಡೆಯಬೇಕು.ಕಾಡಿಗೆ ಅಥವಾ ತೋಟಕ್ಕೆ ಹೋಗುವವರು ಕಡ್ಡಾಯವಾಗಿ ಮೈಗೆ ಡಿಪಾ ತೈಲ ಲೇಪಿಸಿಕೊಳ್ಳಬೇಕು.
ಸಾರ್ವಜನಿಕರು ಸದ್ಯದ ಪರಿಸ್ಥಿತಿಯಲ್ಲಿ ಕಾಡಿಗೆ ಹೋಗುವುದನ್ನು ಹಾಗೂ ಕಾಡಿನ ಒಣ ಎಲೆಗಳನ್ನು (ದರಗು) ಸಂಗ್ರಹಿಸುವುದನ್ನು ನಿಲ್ಲಿಸಬೇಕು.
ಕಾಡಿನಲ್ಲಿ ಅಥವಾ ತೋಟಗಳಲ್ಲಿ ಮಂಗಗಳು ಅಸಹಜವಾಗಿ ಮೃತ ಪಟ್ಟಿರುವುದು ಕಂಡುಬಂದಲ್ಲಿ ತಕ್ಷಣ ಪಶುಸಂಗೋಪನಾ ಇಲಾಖೆ, ಅರಣ್ಯ ಇಲಾಖೆ ಅಥವಾ ಪಂಚಾಯತ್ ರಾಜ್ ಇಲಾಖೆಗೆ ಮಾಹಿತಿ ನೀಡಿ.
ಯಾವುದೇ ಖಾಸಗಿ ಆಸ್ಪತ್ರೆ ಅಥವಾ ಕ್ಲಿನಿಕ್ ಗಳಿಗೆ ಜ್ವರದ ಲಕ್ಷಣವಿರುವ ರೋಗಿಗಳು ಬಂದಲ್ಲಿ, ವೈದ್ಯರು ಅವರಿಗೆ ನೋವು ನಿವಾರಕ ಇಂಜೆಕ್ಷನ್ ಅಥವಾ ಮಾತ್ರೆಗಳನ್ನು ನೀಡಿ ಮನೆಗೆ ಕಳುಹಿಸಬಾರದು. ಬದಲಾಗಿ, ತಕ್ಷಣವೇ ರೋಗಿಯ ಮೊಬೈಲ್ ಸಂಖ್ಯೆಯೊಂದಿಗೆ ಸರ್ಕಾರಿ ಆಸ್ಪತ್ರೆಗೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ, ರಕ್ತ ಪರೀಕ್ಷೆಗೆ ಶಿಫಾರಸು ಮಾಡಬೇಕು.
ಕೆಎಫ್‌ಡಿಗೆ ಸಂಬಂಧಿಸಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಎಸ್‌ಎಎಸ್‌ಟಿ ಅಡಿಯಲ್ಲಿ ನೋಂದಾಯಿತ ಆಸ್ಪತ್ರೆಗಳಲ್ಲಿ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Kshetra Samachara
17/04/2026 04:47 pm