ಧಾರವಾಡ: ಅಕಾಲಿಕ ಮಳೆಗೆ ಉದುರಿ ಬಿದ್ದಿರುವ ಮಾವಿನ ಹಣ್ಣುಗಳು.. ಉದುರಿ ಬಿದ್ದಿರುವ ಮಾವಿನ ಹಣ್ಣು ಆರಿಸುತ್ತಿರುವ ರೈತರು.. ಮತ್ತೊಂದೆಡೆ ಕಪ್ಪು ಚುಕ್ಕೆ ರೋಗಕ್ಕೆ ತುತ್ತಾಗಿ ಕೊಳೆತ ಹಣ್ಣು. ಈ ಎಲ್ಲ ದೃಶ್ಯ ಕಂಡು ಬಂದಿದ್ದು ಧಾರವಾಡದಲ್ಲಿ.
ಹೌದು! ಧಾರವಾಡ ತಾಲೂಕಿನ ನವಲೂರ ಗ್ರಾಮದ ರೈತ ಶಿವನಗೌಡ 14 ಎಕರೆಯಲ್ಲಿ ಮಾವು ಬೆಳೆದಿದ್ದಾನೆ. ಇವರು ವಿವಿಧ ತಳಿಯ ಮಾವು ಬೆಳೆದಿದ್ದಾರೆ. ಅದರಲ್ಲೂ ಧಾರವಾಡ ಅಂದರೆ ಅಲ್ಫಾನ್ಸೋ ಮಾವಿನ ಹಣ್ಣಿಗೆ ಫೇಮಸ್. ಹೀಗಾಗಿ ಅಲ್ಫಾನ್ಸೋ, ರಸಪುರಿ, ಆಪೂಸ್ ಸೇರಿ ವಿವಿಧ ತಳಿಯ ಹಣ್ಣು ಬೆಳೆದಿದ್ದಾರೆ. ಈ ಮಾವಿನ ಬೆಳೆ ಫಸಲಿಗೆ ಬರುವವರೆಗೆ ಎಕರೆಗೆ ಸುಮಾರು 90 ಸಾವಿರದಷ್ಟು ಇವರು ಖರ್ಚು ಮಾಡಿದ್ದಾರೆ. ಆದರೆ ಮಾವು ಬೆಳೆದ ರೈತರಿಗೆ ಇದೀಗ ಲಾಭವಲ್ಲ, ಹಾಕಿದ ಬಂಡವಾಳವೂ ಬರದಂತ ಸ್ಥಿತಿ ನಿರ್ಮಾಣವಾಗಿದೆ.
ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆ, ಗಾಳಿಯಿಂದ ಮಾವು ಬೆಳೆಯೆಲ್ಲ ಹಾಳಾಗಿದೆ. ಆಲಿಕಲ್ಲು ಹೊಡೆದ ಪರಿಣಾಮವಾಗಿ ಮರದಲ್ಲಿ ಕಾಯಿ ಚುಕ್ಕೆ ರೋಗಕ್ಕೆ ತುತ್ತಾಗುತ್ತಿದೆ. ಇದರಿಂದ ಹಣ್ಣು ಆಗುವ ಹೊತ್ತಲ್ಲಿ ಕಾಯಿ ನೆಲಕ್ಕೆ ಉದರುತ್ತಿವೆ. ಧಾರವಾಡ ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೇರ್ಗೂ ಅಧಿಕ ಮಾವಿನ ಬೆಳೆ ಬೆಳೆಯಲಾಗಿದೆ. ಆದರೆ ಬೇಡಿಕೆಗೆ ತಕ್ಕಂತೆ ಮಾವು ಪೂರೈಸಲು ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ರೈತರಿಗೆ ಸಾಧ್ಯವಾಗುತ್ತಿಲ್ಲ. ಇದೀಗ ಈ ಗಾಳಿ ಮತ್ತು ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವರ್ಷವಿಡೀ ರೈತರು ಈ ಮಾವಿನ ಗಿಡಗಳನ್ನು ಉಳಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿರುತ್ತಾರೆ. ಎಕರೆಗೆ ಏನಿಲ್ಲವೆಂದರೂ 80 ರಿಂದ 90 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ, ಆಲಿಕಲ್ಲು ಮಳೆಯಿಂದ ಇದೀಗ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.
ಎಷ್ಟೋ ದಶಕಗಳಿಂದ ಇದೇ ಕೃಷಿಯ ಮೇಲೆ ಅವಲಂಬಿತರಾಗಿರುವ ರೈತರು ಇತ್ತೀಚಿನ ದಿನಗಳಲ್ಲಿ ಮಾವಿನ ಸಹವಾಸವೇ ಬೇಡ ಎನ್ನುತ್ತಿದ್ದಾರೆ. ಎಷ್ಟೋ ಕಡೆಗಳಲ್ಲಿ ರೈತರು ಮಾವಿನ ಮರಗಳನ್ನು ಕತ್ತರಿಸಿ, ಬೇರೆ ಕೃಷಿ ಆರಂಭಿಸಿದ್ದಾರೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಮಾವಿನ ಉತ್ಪಾದನೆ ಕೂಡ ಕಡಿಮೆಯಾಗುತ್ತ ಸಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/04/2026 06:23 pm