ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಮಿಷನರ್ ಕಚೇರಿ ರೌಡಿಗಳ ಅಡ್ಡೆ, ಶಶಿಕುಮಾರ್ ವಿರುದ್ಧ ಕಿಡಿಕಾರಿದ ಶಾಸಕ ಬೆಲ್ಲದ್

ಧಾರವಾಡ: ಹುಬ್ಬಳ್ಳಿ, ಧಾರವಾಡದಲ್ಲಿ ದಿನೇ ದಿನೇ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಅವಳಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೀವ್ರ ಹದಗೆಟ್ಟಿದೆ. ಪೊಲೀಸ್ ಆಯುಕ್ತರ ಕಚೇರಿ ಡೀಲಿಂಗ್ ಮಾಸ್ಟರ್‌ಗಳ ಕೇಂದ್ರವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮೇಲೆ ತೀವ್ರ ಕಿಡಿಕಾರಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬೆಲ್ಲದ, ಉತ್ತರ ಕರ್ನಾಟಕದ ವಿದ್ಯಾಕಾಶಿ ಎನಿಸಿಕೊಂಡಿರುವ ಧಾರವಾಡ ಇಂದು ದರೋಡೆಕೋರರ ಬೀಡಾಗಿದೆ. ಹುಬ್ಬಳ್ಳಿ, ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದಿದೆ. ಪೊಲೀಸ್ ಇಲಾಖೆಯೇ ಈ ಕುಕೃತ್ಯದಲ್ಲಿ ತೊಡಗಿಕೊಂಡಿದೆ. ಧಾರವಾಡದಲ್ಲಿ ಆದಿತ್ಯ ಎಂಬ ಯುವಕನನ್ನು ಪೊಲೀಸ್ ಇಲಾಖೆ ಬಂಧಿಸಿತ್ತು. ಡ್ರಗ್ ಸೇವನೆ ಮಾಡದೇ‌ ಇದ್ದರೂ ಆತನಿಂದ ಹಣ ಪಡೆಯುವ ಕೆಲಸ ಮಾಡಲಾಗಿದೆ. ಕೆಲವರು ಹಣ ಫೋನ್ ಪೇ ಮಾಡಿದ್ದಾರೆ. ಗಾಂಜಾ ಸೇವಿಸುವ ಹಾಗೂ ಸೇವಿಸದೇ ಇರುವ ಯುವಕರಿಂದ ಮಧ್ಯವರ್ತಿ‌ ಮೂಲಕ ಪೊಲೀಸರು ಹಣ ಪಡೆಯುತ್ತಿದ್ದಾರೆ ಎಂದು ಬೆಲ್ಲದ ಆರೋಪಿಸಿದರು.

ಆದಿತ್ಯಾ ತಾಯಿ ಮನೆಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದಾಳೆ. ಈಕೆಗೆ ಆದಿತ್ಯಾ ಒಬ್ಬನೇ ಮಗ. ಪೊಲೀಸರು ಆತನಿಗೆ 2 ಸಾವಿರ ಹಣ ಕೇಳಿದ್ದಾರೆ. ಹಣ ಕೊಡದೇ ಇದ್ದರೆ ಬೇರೆ ಕೇಸ್‌ನಲ್ಲಿ ಹಾಕುತ್ತೇನೆ ಎಂದಿದ್ದಕ್ಕೆ ಆತ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ನೇರವಾಗಿ ಪೊಲೀಸ್ ಇಲಾಖೆಯೇ ಹೊಣೆ. ಹುಬ್ಬಳ್ಳಿ, ಧಾರವಾಡದಲ್ಲಿ ಎರಡು ವರ್ಷದಲ್ಲಿ ಕಾನೂನು ವ್ಯವಸ್ಥೆ ಹದಗೆಡಲು ಕಾರಣ ಯಾರು? ಇಲ್ಲಿ ಕೊಲೆಯಾಗುತ್ತಿವೆ, ಇದಕ್ಕೆ ಕಾರಣ ಪೊಲೀಸ್ ಇಲಾಖೆ ಮುಖ್ಯಸ್ಥ. ಪೊಲೀಸ್ ಆಯುಕ್ತರ ಕಚೇರಿ ಗೂಂಡಾಗಳ ಬೀಡಾಗಿದೆ, ದಲ್ಲಾಳಿಗಳಿಂದ ಕೆಲಸ ನಡೆದಿದೆ. ಪೊಲೀಸ್ ಕಮಿಷನರ್ ಅಡಿಯಲ್ಲಿ ಈ ಎಲ್ಲ ಕೆಲಸ ನಡೆದಿದೆ ಎಂದು ಬೆಲ್ಲದ್ ಆರೋಪಿಸಿದರು.

ರೌಡಿಶೀಟರ್ ಆದವರು ಕಮಿಷನರ್ ಎದುರು ಕುಳಿತುಕೊಂಡರೆ, ಪೊಲೀಸರು ಅವರ ಎದುರು ಎದ್ದು ನಿಲ್ಲುವಂತೆ ಆಗಿದೆ. ಡ್ರಗ್ ಪೆಡ್ಲರ್‌ಗಳಿಂದ ಹಣ ಪಡೆದು ಹಣ ಎತ್ತುವ ಕೆಲಸ ನಡೆದಿದೆ. ಇಸ್ಪೀಟು ಆಡುವವರಿಗೆ ಅಕ್ರಮ ಲೈಸನ್ಸ್ ಕೊಡಲಾಗುತ್ತಿದೆ. ರಿವಾಲ್ವರ್ ಲೈಸನ್ಸ್‌ಗೂ ದುಡ್ಡು ಕೊಡಬೇಕಾದ ಪರಿಸ್ಥಿತಿ ಇದೆ. ಕಾಲಿಗೆ ಗುಂಡು ಹೊಡೆದು ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸ ನಡೆದಿದೆ. ಸಿಎಂ ಮತ್ತು ಗೃಹ ಮಂತ್ರಿಗಳಿಗೆ ನಾನು ಮನವಿ ಮಾಡುತ್ತೇನೆ. ಸಿಎಂ ಅವರೇ ತಮಗೆ ರಾಜಕೀಯ ಜೀವನ ಕೊಟ್ಟ ಬಾದಾಮಿಯ ಮಹಿಳೆಯ ಮಗ ಇವತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಮ್ಮ ಮೇಲೆ ನಂಬಿಕೆ ಇದೆ. ಗೃಹ ಮಂತ್ರಿ ತಾವು ಇಂಟೆಲಿಜೆನ್ಸ್ ವರದಿ ತೆಗೆದುಕೊಳ್ಳಬೇಕು. ಏನು ನಡೆದಿದೆ ಎಂದು ವರದಿ ತೆಗೆದುಕೊಂಡು ನೋಡಿ. ಕಾನ್ಸ್‌ಟೇಬಲ್ ಮೇಲೆ ಕ್ರಮ ಆದರೆ ನಡೆಯುವುದಿಲ್ಲ. ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುವ ಕೆಲಸ ನಡೆದಿದೆ ಎಂದರು.

ಇದು ಆತ್ಮಹತ್ಯೆ ಅಲ್ಲ ಕೊಲೆ, ಇದರ ಮೇಲೆ ಸಿಬಿಐಗೆ ತನಿಖೆ ಮಾಡಬೇಕು. ಸರ್ಕಾರದಿಂದ‌ ಕ್ರಮ ಆಗದೇ ಇದ್ದರೆ ನಾವು ರಸ್ತೆಗೆ ಇಳಿಯಬೇಕಾಗುತ್ತದೆ. ಎರಡು ದಿನದಲ್ಲಿ ಕ್ರಮ ಆಗಬೇಕು, ಗೋಕಾಕ ಚಳುವಳಿ ಇದೇ ನಾಡಿನಿಂದ ಆರಂಭ ಆಗಿದೆ. ಆ‌ ರೀತಿ ಹೋರಾಟ ಆಗಲಿದೆ. ಎರಡು ದಿನದಲ್ಲಿ ಕ್ರಮ ಆಗಲಿ, ವಿದ್ಯಾರ್ಥಿ ಸಾವಿಗೆ ಕೇವಲ ಕಾನ್ಸ್‌ಟೇಬಲ್ ಕಾರಣ ಅಲ್ಲ. ಕಮಿಷನರ್ ಅವರೇ ಇದಕ್ಕೆ ಕಾರಣ. ಮೂರು ವರ್ಷದಲ್ಲಿ ಎಷ್ಟು ಕೊಲೆ ಕ್ರೈಮ್ ಆಗಿವೆ ಎಂದು ನೋಡಿ. ಇಷ್ಟು ಕಾನೂನು ಸುವ್ಯವಸ್ಥೆ ಕುಸಿದಿರಲಿಲ್ಲ. ಇವರು ಗುಂಡು ಹೊಡೆದು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಆ ವಿದ್ಯಾರ್ಥಿ ತಾಯಿಗೆ ಸರ್ಕಾರಿ‌ ನೌಕರಿ ಮತ್ತು 50 ಲಕ್ಷ ಪರಿಹಾರ ಕೊಡಬೇಕು. ಆ ಕುಟುಂಬಕ್ಕೆ ನ್ಯಾಯ ಕೊಡಬೇಕು. ನಮ್ಮ ರಾಜ್ಯ ಪಂಜಾಬ್ ಆಗದಿರಲಿ ಎಂದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/04/2026 07:58 pm

Cinque Terre

5.84 K

Cinque Terre

2

ಸಂಬಂಧಿತ ಸುದ್ದಿ