ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರ ಮಕ್ಕಳ ಆಯೋಗ ಸಮಿತಿ ಸದಸ್ಯನಿಂದ ಮಹಿಳೆಯರಿಗೆ ಬ್ಲಾಕ್ ಮೇಲ್, ಲೈಂಗಿಕ ದೌರ್ಜನ್ಯ..! ಆರೋಪಿ ಬಂಧನ

ಬೆಂಗಳೂರು: ಹಲವು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯವೆಸಗಿ, ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದಡಿ ರಾಮನಗರ ಮಕ್ಕಳ ಆಯೋಗ ಸಮಿತಿ ಸದಸ್ಯ ಹನಿಯೂರು ಚಂದ್ರೇಗೌಡನನ್ನು ಆರ್.ಆರ್. ನಗರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರೇಗೌಡನನ್ನು ನಿನ್ನೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಚಂದ್ರೇಗೌಡ ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ, ಅದನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಈ ವಿಡಿಯೋ ಮತ್ತು ಫೋಟೋಗಳನ್ನು ಬಳಸಿಕೊಂಡು ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ. ತಾನು ಪೊಲೀಸ್ ಅಧಿಕಾರಿ, ವಕೀಲ ಅಥವಾ ಮಾಧ್ಯಮ ಪ್ರತಿನಿಧಿ ಎಂದು ಸುಳ್ಳು ಹೇಳಿ, ನಕಲಿ ಗುರುತಿನ ಚೀಟಿಗಳನ್ನು ತಯಾರಿಸಿಕೊಂಡು ಹಲವರಿಗೆ ಬೆದರಿಕೆ ಹಾಕುತ್ತಿದ್ದ. ಆರೋಪಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಇಪ್ಪತ್ತಕ್ಕೂ ಹೆಚ್ಚು ಮಹಿಳೆಯರ ವಿಡಿಯೋಗಳು ಮತ್ತು ಫೋಟೋಗಳು ಪತ್ತೆಯಾಗಿವೆ.

ಇತ್ತೀಚೆಗೆ ಪತಿಯಿಂದ ದೂರವಾಗಿದ್ದ ಮಹಿಳೆಯೊಬ್ಬರನ್ನು ಚಂದ್ರೇಗೌಡ ಪರಿಚಯ ಮಾಡಿಕೊಂಡಿದ್ದ. ತಾನು ಉಪನ್ಯಾಸಕ ಎಂದು ಪರಿಚಯಿಸಿಕೊಂಡು, ತನಗೂ ವಿಚ್ಛೇದನವಾಗಿದೆ ಎಂದು ಹೇಳಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಆಕೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿ, ಅದನ್ನು ವಿಡಿಯೋ ಮಾಡಿಕೊಂಡಿದ್ದ. ನಂತರ ಇದೇ ವಿಡಿಯೋ ಇಟ್ಟುಕೊಂಡು ಮಹಿಳೆಗೆ ಬೆದರಿಕೆ ಹಾಕಿ, ಐದು ಲಕ್ಷ ರೂಪಾಯಿ ಹಣವನ್ನೂ ಪಡೆದಿದ್ದ. ಒಮ್ಮೆ ದೂರುದಾರ ಮಹಿಳೆ ಚಂದ್ರೇಗೌಡನ ಮೊಬೈಲ್ ಪರಿಶೀಲಿಸಿದಾಗ, ಹಲವು ಮಹಿಳೆಯರ ವಿಡಿಯೋಗಳು ಮತ್ತು ಚಾಟಿಂಗ್ ವಿವರಗಳು ಪತ್ತೆಯಾಗಿವೆ. ಇದರಿಂದ ಆಘಾತಗೊಂಡ ಮಹಿಳೆ ಆರ್.ಆರ್. ನಗರ ಠಾಣೆಗೆ ದೂರು ನೀಡಿದ್ದರು.

ಮಹಿಳೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಆರ್.ಆರ್. ನಗರ ಪೊಲೀಸರು, ಆರೋಪಿ ಚಂದ್ರೇಗೌಡನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

Edited By :
PublicNext

PublicNext

01/05/2026 01:47 pm

Cinque Terre

10.7 K

Cinque Terre

0