ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬರೋಬ್ಬರಿ 160 ಕೋಟಿ ರೂಪಾಯಿ ಮೌಲ್ಯದ ಬಿಡಿಎ ಭೂಮಿಯನ್ನು ಕಬಳಿಸಲು ಯತ್ನಿಸಿದ ಐವರ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಿಡಿಎ ಡಿವೈಎಸ್ಪಿ ಹನುಮಂತರಾಯ ಅವರು ನೀಡಿದ ದೂರಿನ ಆಧಾರದ ಮೇಲೆ ಲಕ್ಷ್ಮೀನಾರಾಯಣ್, ಮಾರುತಿ ಕುಮಾರ್, ಅಂಜಿನಪ್ಪ, ಸೋಮಶೇಖರ್ ಮತ್ತು ಮೋಹನ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬೆಂಗಳೂರು ದಕ್ಷಿಣದ ಉತ್ತರಹಳ್ಳಿಯ ಕೊತ್ತನೂರಿನಲ್ಲಿರುವ ಸರ್ವೆ ನಂ. 177/1 ಮತ್ತು 176/1 ರ ಬಿಡಿಎ ಸ್ವತ್ತನ್ನು ನಕಲಿ ಮಾಲೀಕರು ಮಾರಾಟಕ್ಕೆ ಇಟ್ಟಿದ್ದರು. ಸರ್ವೆ ನಂ. 177/1 ರಲ್ಲಿರುವ 10 ಗುಂಟೆ ಜಾಗವನ್ನು ಬಿಡಿಎ 1994ರ ಅಕ್ಟೋಬರ್ 2ರಂದು ಅಂತಿಮ ಅಧಿಸೂಚನೆ ಹೊರಡಿಸಿ, 1995ರ ಡಿಸೆಂಬರ್ 2ರಂದು ಅಂತಿಮ ತೀರ್ಪು ಅನುಮೋದನೆ ಪಡೆದಿತ್ತು. ನಂತರ 1999ರ ಮೇ 18ರಂದು ಈ ಜಾಗವನ್ನು ಸ್ವಾಧೀನಪಡಿಸಿಕೊಂಡು ಅಭಿಯಂತರ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು.
ಆರೋಪಿಗಳು ಈ ಬಿಡಿಎ ಜಾಗಕ್ಕೆ ನಕಲಿ ಜಿಪಿಎ ಸೃಷ್ಟಿಸಿದ್ದಾರೆ. ಆರ್. ರಮೇಶ್ ನಕಲಿ ಜಿಪಿಎ ಸೃಷ್ಟಿಸಿ, ಅಂಜಿನಪ್ಪ, ಸೋಮಶೇಖರ್, ಮಾರುತಿ ಕುಮಾರ್, ಮೋಹನ್ ಸೇರಿ ಲಕ್ಷ್ಮೀನಾರಾಯಣ್ ಅವರಿಗೆ ಕ್ರಯಪತ್ರ (Sale Deed) ಮಾಡಿದ್ದಾರೆ. ಈ ಕ್ರಯಪತ್ರ ಸಂಖ್ಯೆ BTM-1-01653-2020-21, ಸಿಡಿ ನಂಬರ್ BTMD53 ಎಂದು ದಾಖಲಿಸಲಾಗಿದೆ. ಅಲ್ಲದೆ, ಬಿಎಂಆರ್‌ಸಿಎಲ್‌ನ ಭೂಸ್ವಾಧೀನ ಅಧಿಕಾರಿಗಳು ಕೂಡ ಸರ್ವೆ ನಂ. 177/1 ರಲ್ಲಿ ಕೊತ್ತನೂರು ಡಿಪೋ ಸಂಪರ್ಕ ರಸ್ತೆಗಾಗಿ 2022ರ ಅಕ್ಟೋಬರ್ 27ರಂದು ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಆದೇಶಿಸಿದ್ದರು.
ಬಿಡಿಎಗೆ ಸೇರಿದ ಈ ಸ್ವತ್ತನ್ನು ತಮ್ಮದೆಂದು ಬಿಂಬಿಸಿ, ಪರಿಹಾರ ಹಣ ಪಡೆಯಲು ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಹಿಂದೆ, ಸರ್ವೆ ನಂ. 176/1 ರ ಜಾಗವು 'ಯಾವುದೇ ಮಾಲೀಕರನ್ನು ಹೊಂದಿಲ್ಲ' ಎಂದು ದಾಖಲಾಗಿತ್ತು. ಮೂಲ ಮಾಲೀಕ ಇ.ಆರ್.ಆರ್. ಪಾಲ್ಕಾನ್ ಮರಣದ ನಂತರ ವಾರಸುದಾರರು ಪರಿಹಾರ ಹಣ ಪಡೆದಿದ್ದರು. ಆದರೆ, 1996ರಲ್ಲಿ ವಾರಸುದಾರರಾದ ಮರಿಯಮ್ಮ ಅವರು ಬಿಡಿಎ ಪರಿಹಾರ ಹಣವನ್ನು ಪಡೆದಿರಲಿಲ್ಲ. ಆದರೂ, ಮಾರುತಿ ಕುಮಾರ್ ಮೂಲಕ ಲಕ್ಷ್ಮೀನಾರಾಯಣ್ 2017ರ ಮೇ 25ರಂದು ಕ್ರಯಪತ್ರ ಸಂ. BTM-1-00762/2017/18 ರ ಅಡಿಯಲ್ಲಿ ಈ ಜಾಗವನ್ನು ಖರೀದಿಸಿದ್ದಾರೆ.
ಈ ಸ್ವತ್ತು ಬಿಡಿಎಗೆ ಸೇರಿದ್ದು ಎಂದು 2023ರ ಜನವರಿ 31ರಂದು ಹೈಕೋರ್ಟ್ ಆದೇಶ ನೀಡಿತ್ತು. ಇದೇ ವಿಚಾರವಾಗಿ 2016ರಲ್ಲಿ ಬಿಎಂಟಿಎಫ್ ನಲ್ಲಿ ಎಫ್‌ಐಆರ್ ದಾಖಲಾಗಿ, ಕೆಲವರನ್ನು ಬಂಧಿಸಲಾಗಿತ್ತು. ನಂತರ ಬಿಡಿಎ ಕೂಡ ರಿಟ್ ಅಪೀಲ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. 2024ರಲ್ಲಿಯೂ ನ್ಯಾಯಾಲಯವು ಈ ಆಸ್ತಿ ಬಿಡಿಎಗೆ ಸೇರಿದ್ದು ಎಂದು ಪುನರುಚ್ಚರಿಸಿದೆ. ಇಷ್ಟೆಲ್ಲಾ ವಾಸ್ತವಾಂಶಗಳನ್ನು ಮರೆಮಾಚಿ, ನಕಲಿ ಮಾಲೀಕರು ಈ ಜಾಗವನ್ನು ಮಾರಾಟ ಮಾಡಲು ಮತ್ತು ಕಟ್ಟಡ ನಿರ್ಮಿಸಲು ಮುಂದಾಗಿದ್ದರು.
ಈ ಅಕ್ರಮಗಳ ಬಗ್ಗೆ ಹರ್ಷವರ್ಧನ್ ಆರ್ ಅವರು ಬಿಡಿಎ ಕಮಿಷನರ್‌ಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬಿಡಿಎ ಡಿವೈಎಸ್ಪಿ ಹನುಮಂತರಾಯ ಅವರು ತನಿಖೆ ನಡೆಸಿದಾಗ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಕಬಳಿಸಲು ಯತ್ನಿಸಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ, ಡಿವೈಎಸ್ಪಿ ಹನುಮಂತರಾಯ ಅವರು ಆರೋಪಿಗಳ ವಿರುದ್ಧ ದೂರು ನೀಡಿದ್ದು, ಶೇಷಾದ್ರಿಪುರಂ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Kshetra Samachara
02/05/2026 01:20 pm