ಬೆಂಗಳೂರು: ಹನಿಯೂರು ಚಂದ್ರೇಗೌಡ ದೊಡ್ಡ ಸೆಕ್ಸ್ ವಂಚನೆಯ ಜಾಲ ಇದೀಗ ಬಟಾಬಯಲಾಗಿದೆ. ಪ್ರೊಫೆಸರ್, ಲಾಯರ್, ಡಿಸಿಪಿ, ಜಡ್ಜ್, ರಿಪೋರ್ಟರ್ ಎಂದು ನಾನಾ ವೇಷ ಹಾಕಿ ಮಹಿಳೆಯರನ್ನು ವಂಚಿಸಿ, ಅವರ ಅಶ್ಲೀಲ ವೀಡಿಯೊಗಳನ್ನು ಮಾಡಿಟ್ಟುಕೊಂಡು ಬ್ಲಾಕ್‌ಮೇಲ್ ಮೂಲಕ ಲಕ್ಷಾಂತರ ರೂಪಾಯಿ ದೋಚಿದ್ದ ಚಂದ್ರೇಗೌಡನ ಬಂಡವಾಳ ಬಯಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈತನ ಮೊಬೈಲ್‌ನಲ್ಲಿ 20ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ಫೋಟೋಗಳು ಮತ್ತು ನೂರಾರು ವೀಡಿಯೊಗಳು ಪತ್ತೆಯಾಗಿವೆ.
ಚಂದ್ರೇಗೌಡ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ, ಅವರೊಂದಿಗೆ 'ಲವ್ವಿ ಡವ್ವಿ' ನಡೆಸುತ್ತಿದ್ದ. ಬಳಿಕ ಅವರ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ರಹಸ್ಯವಾಗಿ ಚಿತ್ರೀಕರಿಸುತ್ತಿದ್ದ. ಹಣ ನೀಡದಿದ್ದರೆ ಈ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಬಿಡುವುದಾಗಿ ಬೆದರಿಸಿ, ಹಲವು ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಹಣವನ್ನು ಕಿತ್ತುಕೊಂಡಿದ್ದಾನೆ.
ಈತನ ಬಲೆಗೆ ಬಿದ್ದವರಲ್ಲಿ ಬಹುತೇಕ ವಿವಾಹಿತ ಮಹಿಳೆಯರೇ ಇದ್ದಾರೆ ಎನ್ನಲಾಗಿದೆ. ಅಲ್ಲದೆ, ವಿಧವೆಯರು, ವಿಚ್ಛೇದಿತರು ಸೇರಿದಂತೆ ಅಸಹಾಯಕ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ವಂಚನೆ ಎಸಗಿದ್ದಾನೆ. ಪೊಲೀಸರು ಈಗಾಗಲೇ ವೀಡಿಯೊಗಳಲ್ಲಿರುವ ಕೆಲವು ಮಹಿಳೆಯರನ್ನು ಸಂಪರ್ಕಿಸಿದ್ದಾರೆ. ಆದರೆ, ಸದ್ಯಕ್ಕೆ ತಮ್ಮ ಮಾನಮರ್ಯಾದೆಗೆ ಅಂಜಿ ಅವರು ದೂರು ನೀಡಲು ನಿರಾಕರಿಸಿದ್ದಾರೆ.
ಸದ್ಯ ಹಲವು ನೊಂದ ಮಹಿಳೆಯರು ಚಂದ್ರೇಗೌಡನ ವಿರುದ್ಧ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಸಂತ್ರಸ್ತ ಮಹಿಳೆಯರು ಮುಂದೆ ಬಂದು ದೂರು ನೀಡಿದರೆ, ಆರೋಪಿಗೆ ಮತ್ತಷ್ಟು ಸಂಕಷ್ಟ ಎದುರಾಗುವುದು ಖಚಿತ. ಚಂದ್ರೇಗೌಡನ ವಂಚನೆ ಬಲೆಗೆ ಯಾರೆಲ್ಲ ಬಿದ್ದಿದ್ದಾರೆ ಎಂಬುದರ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
PublicNext
02/05/2026 09:54 am