ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

3 ತಿಂಗಳ ಮಗು ಬಿಟ್ಟು ತಾಯಿ ಆತ್ಮಹತ್ಯೆ : ವರದಕ್ಷಿಣೆ ಕಿರುಕುಳ ಆರೋಪ

ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತಿದ್ದ ಗೃಹಿಣಿಯೊಬ್ಬರು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವಿನ ಹಳೆ ಪೋಸ್ಟ್ ಆಫೀಸ್ ಹತ್ತಿರದ ಮನೆಯಲ್ಲಿ ನಡೆದಿದೆ. ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಕೊಲೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ವಂದನಾ (23) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಗೃಹಿಣಿ. ಈ ದಂಪತಿಗೆ ಕೇವಲ ಮೂರು ತಿಂಗಳ ಮಗುವಿದೆ ಎಂಬುದು ಮತ್ತಷ್ಟು ದುರಂತ.

ಮೂರು ವರ್ಷಗಳ ಹಿಂದೆ ವಿಕ್ರಂ ಶೇಷನ್ ಜೊತೆ ವಂದನಾ ಅವರ ವಿವಾಹವಾಗಿತ್ತು. ಮದುವೆಯಾದಾಗಿನಿಂದಲೂ ಪತಿ ವಿಕ್ರಂ ಶೇಷನ್ ವರದಕ್ಷಿಣೆ ತರುವಂತೆ ನಿರಂತರವಾಗಿ ವಂದನಾಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಹಲವು ಬಾರಿ ಈ ಕುರಿತು ಪತಿ-ಪತ್ನಿ ನಡುವೆ ಗಲಾಟೆಗಳು ನಡೆದಿವೆ. ಆಗ ಕುಟುಂಬದ ಹಿರಿಯರು ರಾಜಿ ಸಂಧಾನ ನಡೆಸಿ, ವಿಕ್ರಂಗೆ ಬುದ್ಧಿ ಹೇಳಿದ್ದರು. ಆದರೂ, ಗಂಡನ ಮನೆಯಲ್ಲಿ ತನಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆಂದು ವಂದನಾ ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದರು.

ವಂದನಾ ನೇಣು ಬಿಗಿದುಕೊಂಡಿರುವ ವಿಷಯ ತಿಳಿದ ತಕ್ಷಣ ಆಕೆಯ ಅತ್ತೆ, ವಂದನಾಳ ತಾಯಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಬಳಿಕ ವಂದನಾಳನ್ನು ಪೋರ್ಟಿಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಆದರೆ, ವಂದನಾ ಪೋಷಕರು, ಆಕೆಯ ಗಂಡನ ಮನೆಯವರು ಹೊಡೆದು ಕೊಲೆ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ವಂದನಾಳ ಅತ್ತೆ ಅಮೃತಾ, ಮಾವ ಶ್ರೀನಿವಾಸ್, ಮೈದುನ ವಿನೀಶ್ ಹಾಗೂ ಗಂಡ ವಿಕ್ರಂ ಶೇಷನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮದುವೆ ಸಮಯದಲ್ಲಿ ವಂದನಾಳ ಪೋಷಕರು ನಾಲ್ಕು ಲಕ್ಷ ಮೌಲ್ಯದ ಗಾಡಿ ಮತ್ತು ಚಿನ್ನಾಭರಣಗಳನ್ನು ನೀಡಿದ್ದರು. ಅಲ್ಲದೆ, ಅದ್ದೂರಿಯಾಗಿ ಮದುವೆ ಮಾಡಿಸಿದ್ದರು ಎಂದು ತಿಳಿದುಬಂದಿದೆ.

Edited By : Somashekar
PublicNext

PublicNext

02/05/2026 11:17 am

Cinque Terre

5.78 K

Cinque Terre

0