ಬೆಂಗಳೂರು: ತಾಲ್ಲೂಕಿನ ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ಕೊರತೆ ತೀವ್ರಗೊಂಡಿದ್ದು, ಗ್ರಾಮಸ್ಥರಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಇ–ಖಾತೆ ವಿತರಣೆಯಲ್ಲಿ ವಿಳಂಬ, ಕೆರೆ–ಏರಿಗಳ ತ್ಯಾಜ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ, ಶುದ್ಧ ಕುಡಿಯುವ ನೀರಿನ ಘಟಕಗಳ ಹದಗೆಟ್ಟ ಸ್ಥಿತಿ, ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಲೋಪ ಹಾಗೂ ಕುಡಿಯುವ ನೀರಿನ ಅಭಾವ ಪ್ರಮುಖ ಸಮಸ್ಯೆಗಳಾಗಿವೆ. ಪಂಚಾಯಿತಿಯಲ್ಲಿ ಅಕ್ರಮ ಹಾಗೂ ಅವ್ಯವಹಾರ ನಡೆದಿರುವ ಆರೋಪಗಳೂ ಕೇಳಿಬಂದಿವೆ. ಕೆರೆ ಮಣ್ಣಿನ ಅಕ್ರಮ ಸಾಗಾಟ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪೂರ್ವಸಿದ್ಧತೆಗಳ ಕೊರತೆ ಕಳವಳಕ್ಕೆ ಕಾರಣವಾಗಿದೆ. ಚರಂಡಿ ಸ್ವಚ್ಛತೆ, ವಿದ್ಯುತ್ ಲೈನ್ ದುರಸ್ತಿ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ತಕ್ಷಣ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಸಂತಿ ಅಮರ್ ಅವರು ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಗ್ರಾಮ ವಸತಿ ಯೋಜನೆಗೆ ಮೀಸಲಿಟ್ಟ ಜಾಗಕ್ಕೂ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಪಿಡಿಒ ವೆಂಕಟೇಶ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಿಇಒ, ಬಾಕಿ ಕಾಮಗಾರಿಗಳು ಹಾಗೂ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಸತಿ ಇಲ್ಲದೆ ಸಂಕಷ್ಟದಲ್ಲಿರುವ ವಿಶೇಷ ಚೇತನ ರಮೇಶ್ ಅವರು ತಮ್ಮ ಸಮಸ್ಯೆಯನ್ನು ಸಿಇಒ ಅವರ ಗಮನಕ್ಕೆ ತಂದರು. ಗ್ರಾಮಸಭೆಯಲ್ಲಿ ನಿವೇಶನಕ್ಕೆ ಅನುಮೋದನೆ ದೊರೆತಿದ್ದರೂ ಸಹ, ಇನ್ನೂ ನಿವೇಶನ ಸಿಗದೆ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು. ಹಕ್ಕಿನಂತೆ ಸಿಗಬೇಕಾದ ನಿವೇಶನವನ್ನು ತಕ್ಷಣ ಮಂಜೂರು ಮಾಡುವಂತೆ ಮನವಿ ಮಾಡಿದರು.
ಇದಲ್ಲದೆ, ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಮಳಿಗೆಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಹರಾಜು ಪ್ರಕ್ರಿಯೆಯ ಮೂಲಕ ಹಂಚಿಕೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸಮಸ್ಯೆಗಳ ತೀವ್ರತೆಯನ್ನು ಗಮನಿಸಿದ ಸಿಇಒ ಅವರು 15 ದಿನಗಳ ಗಡುವು ನಿಗದಿ ಮಾಡಿ, ಅವಧಿಯೊಳಗೆ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದರು. ವಿಫಲವಾದಲ್ಲಿ ಕರ್ತವ್ಯಲೋಪದಡಿ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್ ಹರ್ತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.
Kshetra Samachara
02/05/2026 02:22 pm