ಬೆಳಗಾವಿ: ಬೆಳಗಾವಿ ನಗರದಲ್ಲಿ ಅತಿಕ್ರಮಣ ತೆರವು ಇನ್ನಷ್ಟು ಬಿರುಸುಗೊಳಿಸಿದ ಪಾಲಿಕೆ ಅಧಿಕಾರಿಗಳು, ವಿವಿಧ ಪ್ರಮುಖ ರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮ ಜರುಗಿಸಿದರು.
ನಗರದ ಶಿಸ್ತು, ಸೌಂದರ್ಯ ಕಾಪಾಡುವುದು ಹಾಗೂ ಸಂಚಾರ ಸಂಕಷ್ಟ ದೂರ ಮಾಡುವ ಉದ್ದೇಶದಿಂದ ಎಲ್ಲ ಕಡೆಯ ಒತ್ತುವರಿ ತೆರವು ಮಾಡಬೇಕು. ಈ ಬಗ್ಗೆ ಯಾವುದೇ ಮುನ್ಸೂಚನೆ ನೋಟಿಸ್ ಕೂಡ ನೀಡುವ ಅಗತ್ಯವಿಲ್ಲ. ಏ.14ರ ಬಳಿಕ ಕಾರ್ಯಾಚರಣೆ ಆರಂಭಿಸಬೇಕು ಎಂಬ ನಿರ್ಣಯವನ್ನು, ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಈಚೆಗೆ ನಡೆದ ಸ್ಥಾಯಿ ಸಮಿತಿಗಳ ಸಭೆಯಲ್ಲಿ ಕೈಗೊಳ್ಳಲಾಗಿತ್ತು.
ಮೇಯರ್ ಪ್ರೀತಿ ಕಾಮಕರ ಸಮ್ಮುಖದಲ್ಲಿ ಸ್ಥಾಯಿ ಸಮಿತಿಗಳ ಮುಖಂಡರು ಹಾಗೂ ಬಹುಪಾಲು ಎಲ್ಲ ಸದಸ್ಯರೂ ಒಕ್ಕೊರಲಿನಿಂದ ಧ್ವನಿ ಎತ್ತಿದ್ದರು. ಇದೇ ವಿಷಯ ಪ್ರತಿ ಬಾರಿಯೂ ಪಾಲಿಕೆ ಸಭೆಯಲ್ಲಿ ಪ್ರತಿಧ್ವನಿಸಿತ್ತು.
ಅದರಂತೆ ರಾಣಿ ಚನ್ನಮ್ಮ ವೃತ್ತದಲ್ಲಿ ಹಾಕಿದ ಅನಧಿಕೃತ ಫಲಕಗಳನ್ನು ಅಧಿಕಾರಿಗಳು ತೆರವು ಮಾಡಿದ್ದರು. ಚನ್ನಮ್ಮ ವೃತ್ತ, ಧರ್ಮವೀರ ಸಂಭಾಜಿ ವೃತ್ತ, ಶ್ರೀಕೃಷ್ಣದೇವರಾಯ ವೃತ್ತ, ಬಸ್ ನಿಲ್ದಾಣ ಸೇರಿದಂತೆ ಹಲವು ಕಡೆಗಳನ್ನು ಖಾಸಗಿ ಕಂಪನಿಗಳು ಬೇಕಾಬಿಟ್ಟಿ ಜಾಹೀರಾತು ಫಲಕಗಳನ್ನು ಹಾಕಿದ್ದವು. ಅವುಗಳನ್ನು ಒಂದೇ ದಿನದಲ್ಲಿ ತೆರವು ಮಾಡಿ ನಗರದ ಸೌಂದರ್ಯಕ್ಕೆ ಬಂದಿದ್ದ ಚ್ಯುತಿ ನಿಯಂತ್ರಿಸಿದರು.
ಕ್ಲಬ್ ರಸ್ತೆಯಲ್ಲಿ ಜೆಸಿಬಿಗಳು ಸದ್ದು ಮಾಡಿದವು. ಗಿರಿಯಾಸ್ ಎಲೆಕ್ಟ್ರಾನಿಕ್ ಮಾರಾಟ ಮಳಿಗೆಯವರು, ರಸ್ತೆಯ ಮೇಲೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗುವಂತೆ ಹಾಕಿದ್ದ ಎಲೆಕ್ಟ್ರಾನಿಕ್ ವಸ್ತುಗಳನ್ನು ಜೆಸಿಬಿಯಿಂದ ಎತ್ತಿಕೊಂಡು ಅವರ ಮಳಿಗೆ ಮುಂದೆಯೇ ಬಿಸಾಕಿದರು. ಹಳೆಯ ಫ್ರಿಡ್ಜ್, ಟ್ರಜರಿ, ವಾಷಿಂಗ್ ಮಷಿನ್‌ಗಳನ್ನು ‘ಎಕ್ಸ್‌ಚೇಂಜ್’ ಸಲುವಾಗಿ ತಂದು ಇಡಲಾಗಿತ್ತು. ಇವುಗಳನ್ನು ರಸ್ತೆ ಮೇಲೆಯೇ ಇಟ್ಟು ಜನ ಸಂಚಾರಕ್ಕೆ ಅಡಚಣೆ ಮಾಡಲಾಗಿತ್ತು. ಎಚ್ಚರಿಕೆ ನೀಡಿದರೂ ಮಳಿಗೆಯವರು ಎಚ್ಚೆತ್ತುಕೊಳ್ಳಲಿಲ್ಲ. ಇದರಿಂದ ಪಾಲಿಕೆ ಕಾರ್ಯಾಚರಣೆ ನಡೆಸಿತು.
ಬಳಿಕ ರಸ್ತೆ ಪಕ್ಕದಲ್ಲಿ ತಳ್ಳುವ ಗಾಡಿಗಳ ಮೇಲೆ ಇಟ್ಟಿದ್ದ ತರಕಾರಿ, ಹಣ್ಣು ಮತ್ತಿತರ ಮಾರಾಟಗಾರರನ್ನೂ ತೆರವು ಮಾಡಿದರು. ಎಷ್ಟು ಸಾರಿ ಎಚ್ಚರಿಕೆ ಕೊಟ್ಟರೂ ವ್ಯಾಪಾರಿಗಳು ಬೆಲೆ ಕೊಡದ ಕಾರಣ ತಳ್ಳುವ ಗಾಡಿಗಳನ್ನು ಜೆಸಿಬಿಯಿಂದ ಮುರಿದುಹಾಕಿ, ತೆರವು ಮಾಡಬೇಕಾಯಿತು.
PublicNext
01/05/2026 05:18 pm