ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ವರದಿಗೆ ಕಣ್ಣುತೆರೆದ ಲೋಕೋಪಯೋಗಿ; ಅಥಣಿ - ಖಿಳೇಗಾಂವಿ ರಸ್ತೆ ಕಾಮಗಾರಿ ಶುರು

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ - ಖಿಳೇಗಾಂವಿ ರಾಜ್ಯ ಹೆದ್ದಾರಿ ಕಳೆದ ಹತ್ತು ವರ್ಷಗಳಿಂದ ಸಂಪೂರ್ಣ ಹದಗೆಟ್ಟು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಗುಂಡಿ-ಕುಂಟೆಗಳ ನಡುವೆ ಜೀವ ಪಣಕ್ಕಿಟ್ಟು ಸಂಚಾರ ಮಾಡುವ ಸ್ಥಿತಿ ನಿರ್ಮಾಣವಾಗಿದ್ದರಿಂದ ಸಾರ್ವಜನಿಕರು ಅನೇಕ ಬಾರಿ ಆಕ್ರೋಶ ಹೊರಹಾಕಿದ್ದರು. ರಸ್ತೆ ದುಸ್ಥಿತಿ ಕುರಿತು ಪಬ್ಲಿಕ್ ನೆಕ್ಸ್ಟ್ ನಿರಂತರವಾಗಿ ಸಾಲುಸಾಲು ವರದಿಗಳನ್ನು ಪ್ರಸಾರ ಮಾಡುತ್ತಾ ಲೋಕೋಪಯೋಗಿ ಇಲಾಖೆಯ ಗಮನ ಸೆಳೆಯುವ ಕೆಲಸ ಮಾಡಿತ್ತು.

ಪಬ್ಲಿಕ್ ನೆಕ್ಸ್ಟ್ ವರದಿಗಳ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆ ನಾಲ್ಕು ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದ್ದು, ಕಳೆದ ತಿಂಗಳು ಅಥಣಿ ಶಾಸಕ ಲಕ್ಷ್ಮಣ ಸವದಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಚಾಲನೆ ನೀಡಿ ಒಂದು ತಿಂಗಳು ಕಳೆದರೂ ಕಾಮಗಾರಿ ಆರಂಭವಾಗದೇ ಜನರಲ್ಲಿ ಅಸಮಾಧಾನ ಮೂಡಿತ್ತು. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡ ಪಬ್ಲಿಕ್ ನೆಕ್ಸ್ಟ್, “ಸವದಿ ಕೈ ಪೂಜೆಗೆ ಬೆಲೆ ಇಲ್ವಾ?” ಎಂಬ ಕಟು ಶೀರ್ಷಿಕೆಯಲ್ಲಿ ಮತ್ತೊಮ್ಮೆ ವರದಿ ಪ್ರಸಾರ ಮಾಡಿತ್ತು.

ಈ ವರದಿ ಪ್ರಸಾರವಾದ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಂಡು ಇದೀಗ ಅಥಣಿ-ಖಿಳೇಗಾಂವಿ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಭರದಿಂದ ಆರಂಭಿಸಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ಶುರುವಾಗಿರುವುದಕ್ಕೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದು, ಜನರ ಸಮಸ್ಯೆಗೆ ಧ್ವನಿಯಾದ ಪಬ್ಲಿಕ್ ನೆಕ್ಸ್ಟ್ ವರದಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವರ್ಷಗಳ ನಿರ್ಲಕ್ಷ್ಯಕ್ಕೆ ಕೊನೆಗೂ ಮುಕ್ತಿ ಸಿಕ್ಕಂತಾಗಿದ್ದು, ಕಾಮಗಾರಿ ಗುಣಮಟ್ಟದಿಂದ ಪೂರ್ಣಗೊಳ್ಳಲಿ ಎನ್ನುವುದು ಜನರ ಆಶಯ.

Edited By : Vinayak Patil
PublicNext

PublicNext

03/05/2026 05:53 pm

Cinque Terre

18.13 K

Cinque Terre

0

ಸಂಬಂಧಿತ ಸುದ್ದಿ