ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅನುಮತಿ ಕೊಟ್ಟರೂ ಕೊಡದಿದ್ದರೂ ಹೋರಾಟ - ಉದ್ಯೋಗಾಕಾಂಕ್ಷಿಗಳಿಗೆ ಮತ್ತಷ್ಟು ಬಲ

ಧಾರವಾಡ: ಗುರ್ಲಾಪುರ ಕ್ರಾಸ್‌ನಲ್ಲಿ ನಡೆದಿದ್ದ ಕಬ್ಬು ಬೆಳೆಗಾರರ ಹೋರಾಟ ಇಡೀ ರಾಜ್ಯದ ಗಮನಸೆಳೆದಿತ್ತು. ಹೋರಾಟಗಾರರು ಕುಳಿತ ಜಾಗದಲ್ಲೇ ರಾಜ್ಯ ಸರ್ಕಾರದ ಅರ್ಧ ಮಂತ್ರಿ ಮಂಡಲವೇ ಬಂದು ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಿತ್ತು. ಈಗ ಉದ್ಯೋಗಾಕಾಂಕ್ಷಿಗಳ ಹೋರಾಟ ಕೂಡ ಇದೇ ರೀತಿ ನಡೆಯುವ ಸಾಧ್ಯತೆ ಇದೆ.

ಹೌದು! ವಿದ್ಯಾಕಾಶಿ ಧಾರವಾಡ ಇದೀಗ ಉದ್ಯೋಗಾಕಾಂಕ್ಷಿಗಳ ಹೋರಾಟದ ಹಾಟ್‌ಸ್ಪಾಟ್ ಆಗಿದೆ. ಉದ್ಯೋಗಾಕಾಂಕ್ಷಿಗಳು ಎರಡ್ಮೂರು ಸುತ್ತಿನ ಹೋರಾಟವನ್ನು ಇದೇ ಧಾರವಾಡದಲ್ಲಿ ನಡೆಸಿದ್ದಾರೆ. ಸರ್ಕಾರ ಕೂಡ ನೋಟಿಫಿಕೇಶನ್ ಹೊರಡಿಸುವ ಭರವಸೆ ನೀಡಿದೆ. ಆದರೆ, ಇದುವರೆಗೂ ಯಾವುದೇ ನೇಮಕಾತಿ ಆಗಿಲ್ಲ ಎಂದು ಉದ್ಯೋಗಾಕಾಂಕ್ಷಿಗಳು ಇತ್ತೀಚೆಗಷ್ಟೇ ಬಿಜೆಪಿ ಜೊತೆ ಕೈಜೋಡಿಸಿ ಹೋರಾಟ ನಡೆಸಿದರು. ಪೊಲೀಸರು ಈ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಅನುಮತಿ ಕೊಡದೇ ಹೋದಾಗ ಅವರು ಕೋರ್ಟ್ ಮೆಟ್ಟಿಲು ಸಹ ಏರಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇದೀಗ ಉದ್ಯೋಗಾಕಾಂಕ್ಷಿಗಳ ಹೋರಾಟ ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಇದೀಗ ಈ ಹೋರಾಟದ ನೇತೃತ್ವವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಹಿಸಿದೆ. ಅಷ್ಟೇ ಅಲ್ಲದೇ ಗುರ್ಲಾಪುರ ಕ್ರಾಸ್‌ನಲ್ಲಿ ಕಬ್ಬು ಬೆಳೆಗಾರರ ಹೋರಾಟದ ಮುಂದಾಳತ್ವ ವಹಿಸಿದ್ದ ಶಶಿಕಾಂತ ಗುರೂಜಿ ಸಹ ಇದೀಗ ಉದ್ಯೋಗಾಕಾಂಕ್ಷಿಗಳ ಬೆನ್ನಿಗೆ ನಿಂತಿದ್ದಾರೆ.

ನೇಮಕಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ. ರಾಜ್ಯದಲ್ಲಿ 2 ಲಕ್ಷ 86 ಸಾವಿರ ಹುದ್ದೆ ಖಾಲಿ ಇವೆ. ಸರ್ಕಾರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬಹುದು ಎಂದು ಕಾಯುತ್ತಿದ್ದರೂ ಸರ್ಕಾರ ಮಾತ್ರ ಕಿವಿಗೊಡುತ್ತಿಲ್ಲ. ಉದ್ಯೋಗಾಕಾಂಕ್ಷಿಗಳ ವಯಸ್ಸು ಮೀರುತ್ತಿದೆ. ಅವರು ತೊಂದರೆಯಲ್ಲಿದ್ದಾರೆ. ಹೀಗಾಗಿ 31 ಜಿಲ್ಲೆಯ ರೈತರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಶೀಘ್ರ ಧಾರವಾಡದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಶಶಿಕಾಂತ ಗುರೂಜಿ ತಿಳಿಸಿದ್ದಾರೆ.

ಕೆಪಿಎಸ್‌ಸಿಯಲ್ಲೂ ಸಾಕಷ್ಟು ಅವ್ಯವಹಾರ ನಡೆದಿದೆ. ಇದರ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ಪರೀಕ್ಷೆಯ ಪ್ರಶ್ನೆಯಲ್ಲಿ ಗಂಭೀರ ದೋಷಗಳಿದ್ದರೂ ಅದರ ಬಗ್ಗೆ ಈ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ಈ ಬಗ್ಗೆ ಸದನ ಸಮಿತಿ ಮಾಡಲಾಗುತ್ತದೆ ಎನ್ನುತ್ತಾರೆ. ಸದನ ಸಮಿತಿ ಮೇಲೆ ಯಾರಿಗೂ ನಂಬಿಕೆ ಇರುವುದಿಲ್ಲ. ಈ ಸಮಿತಿಯಲ್ಲಿ ಇರುವವರು ಮಂತ್ರಿಗಳೇ ಇರುತ್ತಾರೆ. ಕೆಪಿಎಸ್‌ಸಿ ಮರು ಪರೀಕ್ಷೆ ಆಗಬೇಕು ಎಂಬ ಒತ್ತಾಯವೂ ಈ ಹೋರಾಟದ ಒಂದು ಭಾಗವಾಗಿದೆ. ನೇಮಕಾತಿ ಹಾಗೂ ಕೆಪಿಎಸ್‌ಸಿ ಮರು ಪರೀಕ್ಷೆ ನಡೆಸಬೇಕು ಎಂದು ಇದೀಗ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.

ಒಟ್ಟಾರೆ ಧಾರವಾಡದಲ್ಲಿ ಮತ್ತೊಮ್ಮೆ ಉದ್ಯೋಗಾಕಾಂಕ್ಷಿಗಳ ಹೋರಾಟ ನಡೆಯಲಿದ್ದು, ಈ ಬಾರಿ ಈ ಹೋರಾಟ ತೀವ್ರವಾಗಿಯೇ ನಡೆಯುವ ಸಾಧ್ಯತೆ ಇದೆ. ಹೋರಾಟದ ಮುಂಚೆಯೇ ಸರ್ಕಾರ ನೇಮಕಾತಿಗೆ ಅಧಿಸೂಚನೆ ಹೊರಡಿಸುತ್ತದೆಯಾ ಅಥವಾ ಹೋರಾಟಕ್ಕೆ ಅವಕಾಶ ಮಾಡಿಕೊಡುತ್ತದೆಯಾ ಕಾದು ನೋಡಬೇಕಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/05/2026 07:46 pm

Cinque Terre

49.58 K

Cinque Terre

1

ಸಂಬಂಧಿತ ಸುದ್ದಿ