ನವಲಗುಂದ: ಮನುಷ್ಯ ತನ್ನನ್ನು ತಾನು ಅರಿತು ಬದುಕುವುದರೊಂದಿಗೆ ತನ್ನೊಳಗಿನ ಆತ್ಮದಲ್ಲಿರುವ ಕನ್ನಡಿಯನ್ನು ತೆರೆದುಕೊಳ್ಳುವುದೆ ಆಧ್ಯಾತ್ಮ ಎಂದು ಮಣಕವಾಡ ದೇವ ಮಂದಿರದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮಿಜಿ ಹೇಳಿದರು.
ಪಟ್ಟಣದ ಹಿರೇಮಠದ ನೂತನ ಪೀಠಾಧಿಕಾರಿಗಳ ಗುರು ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಆಯೋಜಿಸಲಾಗಿದ್ದ 11ದಿನಗಳ ನಿತ್ಯ ಧಾರ್ಮಿಕ ಪ್ರವಚನ, ಧರ್ಮ ಜಾಗೃತ ಜಾಥಾ ಹಾಗೂ ಬೈಕ ರ‍್ಯಾಲಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸಂತರು, ಶರಣರು ನಡೆಸುವ ಪ್ರವಚನಗಳು ಮಾನವ ಕುಲ ಧರ್ಮದ ಹಾದಿಯಲ್ಲಿ ನಡೆಸುವಂತಹ ಪ್ರೇರಣಾದಾಯಕ ಕಾಯಕವಾಗಿದ್ದು ಎಲ್ಲರೂ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಂಸ್ಕಾರಯುತ ಜೀವನ ನಡೆಸಲು ಮುಂದಾಗಬೇಕೆಂದರು.
ಗುರು ಪಟ್ಟಾಧಿಕಾರ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ ಪಟ್ಟಣದಲ್ಲಿ 34ವರ್ಷಗಳ ನಂತರ ಪಂಚಪೀಠಾಧ್ಯಕ್ಷರ ಸಮ್ಮುಖದಲ್ಲಿ ನೂತನ ಪೀಠಾಧಿಕಾರ ಮಹೋತ್ಸವ ನಿಮಿತ್ತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಪಟ್ಟಣವೂ ಸೇರಿದಂತೆ ತಾಲೂಕಿನ ಭಕ್ತರು ಜಾತಿ, ಮತಗಳನ್ನೂ ಮೀರಿ ಬೃಹತ್ ಪ್ರಮಾಣದ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿದ್ದು ತಾಲೂಕಿನ ನಾಗರಿಕರ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿದ್ದು, ಮೇ.1ರಿಂದ 13ರ ವರೆಗೆ ನಡೆಯುವ ಎಲ್ಲ ಧಾರ್ಮಿಕ ಕಾರ್ಯ ಹಾಗೂ ಪಟ್ಟಾಧಿಕಾರ ಮಹೋತ್ಸವಕ್ಕೆ ತಾಲೂಕಿನ ಎಲ್ಲ ಭಕ್ತರು ತನು, ಮನದಿಂದ ಸಹಕಾರ ನೀಡುವ ಮೂಲಕ ಪಟ್ಟಾಧಿಕಾರ ಮಹೋತ್ಸವ ಯಶಸ್ವಿಗೊಳಿಸಬೇಕೆಂದರು.
ಯುವ ಮುಖಂಡ ವಿನೋದ ಅಸೂಟಿ ಮಾತನಾಡಿ ಮನುಕುಲವನ್ನು ಮುನ್ನಡೆಸಲು ಎಲ್ಲವನ್ನೂ ತ್ಯಾಗ ಮಾಡಿ ಸಮಾಜಕ್ಕಾಗಿ ಸನ್ಯಾಸ ಸ್ವೀಕಾರ ಮಾಡಿ ಸಮಾಜವನ್ನು ಧರ್ಮದ ದಾರಿಗೆ ಕೊಂಡೊಯ್ಯಲು ತಮ್ಮನ್ನು ಮುಡಿಪಾಗಿ ಇಟ್ಟುಕೊಂಡು ಸನ್ಮಾರ್ಗ ತೋರುವ ಶ್ರೀ ಗಳ ಪಟ್ಟಾಧಿಕಾರ ಮಹೋತ್ಸವ ನಡೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಇದಕ್ಕೂ ಮೊದಲು ಶ್ರೀಮಠದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಧರ್ಮ ಜಾಗೃತ ಜಾಥಾದಲ್ಲಿ ನೂರಾರು ಮಹಿಳೆಯರು ಆರತಿ ಹಿಡಿದರು ಮೆರವಣೆಗೆ ನಡೆಸಿದರೆ, ಸಕಲ ವಾದ್ಯ ಮೇಳಗಳೊಂದಿಗೆ ಶ್ರೀ ಸಿದ್ಧೇಶ್ವರ ಶಿವಾಚಾರ್ಯರನ್ನು ಸಾರೋಟದಲ್ಲಿ ಮೆರವಣೆಗೆ ಮೂಲಕ ಬೈಕ್ ರ‍್ಯಾಲಿ ನಡೆಸಲಾಯಿತು.
ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಜಿ, ಗವಿಮಠದ ಶ್ರೀ ಬಸವಲಿಂಗ ಸ್ವಾಮಿಜಿ, ಶಿರಕೋಳ ಹಿರೇಮಠದ ಸಿದ್ಧರಾಮ ಸ್ವಾಮಿಜಿ, ತುಪ್ಪದಕುರಟ್ಟಿಯ ಡಾ.ವಾಗೀಶಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ, ಅಭಿನವ ಸಿದ್ಧರೂಢ ಸ್ವಾಮಿಜಿ, ಅಮ್ಮಿನಭಾವಿ ಹಿರೇಮಠದ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮಿಜಿ, ನರಗುಂದ ಹಿರೇಮಠದ ಶ್ರೀ ಸಿದ್ಧಲಿಂಗ ಸ್ವಾಮಿಜಿ, ನಾಗಲಿಂಗ ಮಠದ ಶ್ರೀ ವೀರಯ್ಯ ಸ್ವಾಮಿಜಿ, ವೀರಬಸವದೇವರು ವೇದಿಕೆ ಮೇಲಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/05/2026 09:32 am