ಅಥಣಿ: ಪಟ್ಟಣದ ಅಥಣಿ - ಗೋಕಾಕ ರಸ್ತೆಯಲ್ಲಿರುವ ನಿಮ್ರಾ ಮಸೀದಿ ಸಮೀಪ ಹಾಗೂ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ನೂತನ ವೈನ್ಸ್ ಮತ್ತು ಬಾರ್ ಆರಂಭಕ್ಕೆ ಸಿದ್ಧತೆ ನಡೆಯುತ್ತಿರುವುದು ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಸೀದಿ ಸಮೀಪ ಮದ್ಯದಂಗಡಿ ಆರಂಭಕ್ಕೆ ಅಂಜುಮನ್ ಸಂಸ್ಥೆ, ಮುಸ್ಲಿಂ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡಬಾರದು ಎಂದು ಆಗ್ರಹಿಸಿ ತಹಸೀಲ್ದಾರ್, ಅಬಕಾರಿ ಇಲಾಖೆ ಹಾಗೂ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.
ಅಬಕಾರಿ ನಿಯಮಗಳ ಪ್ರಕಾರ ಮದ್ಯದಂಗಡಿ, ವೈನ್ಸ್ ಅಥವಾ ಎಂ.ಎಸ್.ಐ.ಎಲ್ ಮಳಿಗೆಗಳು ವಸತಿ ಪ್ರದೇಶ, ಧಾರ್ಮಿಕ ಸ್ಥಳ, ಆಸ್ಪತ್ರೆ ಹಾಗೂ ಶಾಲೆಗಳಿಂದ ಕನಿಷ್ಠ 100 ಮೀಟರ್ ದೂರದಲ್ಲಿರಬೇಕು. ಅಲ್ಲದೆ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ರಾಜ್ಯ ಹೆದ್ದಾರಿಯ ಸಮೀಪವೂ ಇಂತಹ ಮಳಿಗೆಗಳಿಗೆ ನಿರ್ಬಂಧವಿದೆ. ಆದರೆ ಉದ್ದೇಶಿತ ಮದ್ಯದಂಗಡಿ ನಿಮ್ರಾ ಮಸೀದಿಗೆ ತೀರ ಸಮೀಪದಲ್ಲಿದ್ದು, ಸುತ್ತಮುತ್ತ ದಟ್ಟ ವಸತಿ ಪ್ರದೇಶಗಳಿರುವುದರಿಂದ ಮಹಿಳೆಯರು, ಮಕ್ಕಳು ಹಾಗೂ ಮಸೀದಿಗೆ ಬರುವ ಭಕ್ತಾದಿಗಳಿಗೆ ತೊಂದರೆಯಾಗುವ ಆತಂಕ ವ್ಯಕ್ತವಾಗಿದೆ. ಮದ್ಯಪಾನಿಗಳ ಹಾವಳಿಯಿಂದ ಸಾರ್ವಜನಿಕ ಶಾಂತಿ, ಸಂಚಾರ ಹಾಗೂ ಪ್ರದೇಶದ ನೆಮ್ಮದಿಗೆ ಧಕ್ಕೆಯಾಗಬಹುದು ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.
ಈ ಹಿನ್ನೆಲೆಯಲ್ಲಿ ನಿಮ್ರಾ ಮಸೀದಿ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮಾಜದ ಬಾಂಧವರು ಶಾಂತಿಯುತ ಪ್ರತಿಭಟನೆ ನಡೆಸಿ, ಬಳಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಧರ್ಮಗುರುಗಳು, ಯಾವುದೇ ಧರ್ಮದ ಪವಿತ್ರ ಸ್ಥಳಗಳ ಆಸುಪಾಸಿನಲ್ಲಿ ಮದ್ಯದಂಗಡಿ ಅಥವಾ ಬಾರ್‌ಗಳು ಸ್ಥಾಪನೆಯಾಗುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವಿಚಾರ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಥಣಿ ತಾಲೂಕು ಭಾವೈಕ್ಯತೆ ಮತ್ತು ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಇಂತಹ ನಿರ್ಧಾರಗಳು ಸಮಾಜದ ಶಾಂತಿಗೆ ಧಕ್ಕೆ ತರಬಾರದು. ಹೀಗಾಗಿ ಸಾರ್ವಜನಿಕರ ಭಾವನೆಗೆ ಗೌರವ ನೀಡಿ, ನಿಮ್ರಾ ಮಸೀದಿ ಸಮೀಪ ಮದ್ಯ ಮಾರಾಟದ ಪರವಾನಗಿ ತಕ್ಷಣವೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
Kshetra Samachara
03/05/2026 03:59 pm
LOADING...