ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸ ಕಾರ್ಗದ್ದೆ ಗ್ರಾಮದ ಹೇರಡಿಕೆ ಮತ್ತು ಗಾಳಿಗಂಡಿ ಸಂಪರ್ಕ ರಸ್ತೆ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಇದಕ್ಕೆ ಮೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನವೇ ನೇರ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಭಾಗದ ಜನರು ಸುಸಜ್ಜಿತ ರಸ್ತೆಗಾಗಿ ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದು, ಈ ಹಿಂದೆ ಚುನಾವಣೆ ಬಹಿಷ್ಕಾರದಂತಹ ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದರು. ಪ್ರಸ್ತುತ ರಸ್ತೆ ನಿರ್ಮಾಣ ಕಾರ್ಯಕ್ಕೆ ಸರ್ಕಾರದ ಒಪ್ಪಿಗೆ ಸಿಕ್ಕು ಕೆಲಸ ಆರಂಭವಾಗಿದ್ದರೂ, ರಸ್ತೆಯ ಮಧ್ಯಭಾಗದಲ್ಲಿ ತಲೆ ಎತ್ತಿ ನಿಂತಿರುವ ವಿದ್ಯುತ್ ಕಂಬಗಳು ಕಾಮಗಾರಿಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿವೆ.
ಈ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಮತ್ತು ಸಂಬಂಧಪಟ್ಟ ಇಲಾಖೆಗಳು ಹಲವು ಬಾರಿ ಮನವಿ ಮಾಡಿದರೂ ಮೆಸ್ಕಾಂ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ ಎಂದು ಸ್ಥಳೀಯರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಇನ್ನು ಪಿಡಬ್ಲ್ಯೂಡಿ ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರು ಹತ್ತು ತಿಂಗಳ ಹಿಂದೆಯೇ ಕಂಬ ಸ್ಥಳಾಂತರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ. ಅಧಿಕಾರಿಗಳು ಸಾರ್ವಜನಿಕರ ಫೋನ್ ಕರೆಗಳಿಗೂ ಸ್ಪಂದಿಸುತ್ತಿಲ್ಲ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರದ ಅಭಿವೃದ್ಧಿ ಕೆಲಸಕ್ಕೆ ಅಧಿಕಾರಿಗಳೇ ವಿಳಂಬ ಧೋರಣೆ ಅನುಸರಿಸುತ್ತಿರುವುದು ಜನರ ಆಕ್ರೋಶವನ್ನು ಇಮ್ಮಡಿಗೊಳಿಸಿದೆ.
PublicNext
05/05/2026 07:15 pm
LOADING...