ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಜಯಗಳಿಸಿ ನೂತನ ಶಾಸಕರಾಗಿರುವ ಜೀವರಾಜ್ ಅವರಿಗೆ ಪ್ರಮಾಣವಚನ ಬೋಧಿಸಲು ತಡ ಮಾಡುತ್ತಿರುವ ಕುರಿತು ಬಿಜೆಪಿ ನಾಯಕರ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಶಾಸಕ ಆರಗ ಜ್ಞಾನೇಂದ್ರ ಅವರನ್ನೊಳಗೊಂಡ ನಿಯೋಗವು ಮಂಗಳವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಜೀವರಾಜ್ ಅವರ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬದ ಕುರಿತು ಅಧಿಕೃತವಾಗಿ ದೂರು ಸಲ್ಲಿಸಿತು.
ಕೋರ್ಟ್ ಆದೇಶದ ನಂತರ ನಡೆದ ಮರುಎಣಿಕೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರೂ, ಸ್ಪೀಕರ್ ಯು.ಟಿ. ಖಾದರ್ ಅವರು ಪ್ರಮಾಣ ವಚನ ಬೋಧಿಸಲು ನಿರಂತರವಾಗಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ನಿಯೋಗವು ರಾಜ್ಯಪಾಲರ ಗಮನಕ್ಕೆ ತಂದಿತು. ಸ್ಪೀಕರ್ ಅವರನ್ನು ಸಂಪರ್ಕಿಸಿದಾಗ ಕಾನೂನು ಸಲಹೆಯ ನೆಪವೊಡ್ಡಿ ದಿನ ದೂಡುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ಎಂದು ನಾಯಕರು ಆಕ್ಷೇಪ ವ್ಯಕ್ತಪಡಿಸಲಾಗಿದ್ದು, ಸಂವಿಧಾನದ 188ನೇ ವಿಧಿಯ ಪ್ರಕಾರ ಶಾಸಕರಿಗೆ ಪ್ರಮಾಣ ವಚನ ಬೋಧಿಸುವ ಅಂತಿಮ ಜವಾಬ್ದಾರಿ ರಾಜ್ಯಪಾಲರದ್ದೇ ಆಗಿರುತ್ತದೆ.
ಅಗತ್ಯ ಬಿದ್ದಲ್ಲಿ ರಾಜ್ಯಪಾಲರೇ ನೇರವಾಗಿ ಅಥವಾ ತಮ್ಮ ಪ್ರತಿನಿಧಿಯಾಗಿ ಹಿರಿಯ ಶಾಸಕರನ್ನು ನೇಮಿಸಿ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂಬ ಅಂಶವನ್ನು ಮನವಿಯಲ್ಲಿ ಒತ್ತಿ ಹೇಳಲಾಯಿತು.
ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾದಾಗ ಅಲ್ಲಿನ ರಾಜ್ಯಪಾಲರು ಮಧ್ಯಪ್ರವೇಶಿಸಿ ಪ್ರಮಾಣ ವಚನ ಮಾಡಿಸಿದ್ದ ಉದಾಹರಣೆಯನ್ನು ಇಲ್ಲಿ ಉಲ್ಲೇಖಿಸಲಾಯಿತು. ರಾಜ್ಯಪಾಲರು ಕೂಡಲೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ತ್ವರಿತವಾಗಿ ಪ್ರಮಾಣ ವಚನಕ್ಕೆ ಕ್ರಮ ಕೈಗೊಳ್ಳಬೇಕೆಂದು ನಿಯೋಗವು ವಿನಂತಿಸಿದೆ.
PublicNext
06/05/2026 10:12 am
LOADING...