ಚಿಕ್ಕಮಗಳೂರು: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭೂತಪೂರ್ವ ಗೆಲುವಿನ ಹಿಂದೆ ಕರ್ನಾಟಕದ ಯುವಕನೊಬ್ಬನ ಚಾಣಾಕ್ಷ ತಂತ್ರಗಾರಿಕೆ ಅಡಗಿದೆ ಎನ್ನುವುದು ಹೆಮ್ಮೆಯ ವಿಷಯ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಗ್ರಾಮದ ಅರುಣ್ ಬಿನ್ನಡಿ ಅವರು ಈ ಸಂಘಟನಾತ್ಮಕ ಯಶಸ್ಸಿನ ರೂವಾರಿಯಾಗಿ ಹೊರಹೊಮ್ಮಿದ್ದಾರೆ.
ಇತ್ತೀಚೆಗೆ ಅವರ ನಿವಾಸದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಅವರಿಗೆ ಅಭಿನಂದನೆ ಸಲ್ಲಿಸಿ, ಆತ್ಮೀಯವಾಗಿ ಸನ್ಮಾನಿಸಿದರು.
ದೇಶಸೇವೆಯ ತುಡಿತದಿಂದ ಕೈತುಂಬಾ ಸಂಬಳ ಬರುತ್ತಿದ್ದ ಉದ್ಯೋಗಕ್ಕೆ ರಾಜೀನಾಮೆ ನೀಡಿ ಬಂದ ಅರುಣ್, ತಾನು ನಂಬಿದ ಸಿದ್ಧಾಂತಕ್ಕಾಗಿ ಎಲೆಮರೆಯ ಕಾಯಿಯಂತೆ ಕೆಲಸ ಮಾಡಿದವರು. 2019ರ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ಅವರ ದಾಖಲೆ ಮತಗಳ ಜಯ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಲ್ಬುರ್ಗಿ ಕ್ಷೇತ್ರದಲ್ಲಿ ವಿರೋಧ ಪಕ್ಷದ ಪ್ರಬಲ ನಾಯಕರ ವಿರುದ್ಧ ನಡೆಸಿದ ಸಂಘಟನಾತ್ಮಕ ಹೋರಾಟದಲ್ಲಿ ಅರುಣ್ ಪಾತ್ರ ಬಹಳ ದೊಡ್ಡದಿತ್ತು.
ಸದಾ ಸವಾಲುಗಳನ್ನು ಇಷ್ಟಪಡುವ ಇವರು, ಬಂಗಾಳದ ಚುನಾವಣಾ ಕಣದಲ್ಲಿ ನಾರ್ತ್ ಜೋನ್ ಸಿಲಿಗುರಿ ವಿಭಾಗದ ಸಂಘಟನಾ ಪ್ರಭಾರಿಯಾಗಿ ಗೆಲುವಿನ ತಂತ್ರಗಳನ್ನು ಹೆಣೆದಿದ್ದರು.
ರಾಜಕೀಯ ಪಿತೂರಿಗಳಿಂದಾಗಿ ಕೆಲ ಕಾಲ ಸಂಘಟನೆಯಿಂದ ದೂರ ಉಳಿದು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಅರುಣ್, ಪಕ್ಷ ವಹಿಸಿದ ಹೊಸ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಿಂಗಳಾನುಗಟ್ಟಲೆ ದೂರದ ಬಂಗಾಳದ ನೆಲದಲ್ಲಿ ಆನ್ ಗ್ರೌಂಡ್ ಕೆಲಸ ಮಾಡುವ ಮೂಲಕ ಕರ್ನಾಟಕದ ಹುಡುಗನೊಬ್ಬ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಈ ಗೆಲುವಿನ ಸಂಭ್ರಮವನ್ನು ಹಂಚಿಕೊಳ್ಳಲು ಮೂಡಿಗೆರೆ ಭಾಗದ ಕಾರ್ಯಕರ್ತರು ಬಿನ್ನಡಿ ಗ್ರಾಮಕ್ಕೆ ತೆರಳಿ, ಶ್ರಮಜೀವಿ ಅರುಣ್ ಅವರಿಗೆ ಗೌರವ ಸಲ್ಲಿಸಿದರು.
PublicNext
06/05/2026 10:10 am
LOADING...