ಧಾರವಾಡ: ಆಕಾಶವಾಣಿ ಸಾರ್ವಜನಿಕ ಪ್ರಸಾರ ಸೇವೆಯ 90 ವರ್ಷದ ನಿಮಿತ್ತ ಮೇ 8 ರಂದು ಆಕಾಶವಾಣಿ ಧಾರವಾಡ ಕೇಂದ್ರದ 90ರ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ ಎಂದು ಆಕಾಶವಾಣಿ ಧಾರವಾಡ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥೆ ಮಂಜುಳಾ ಪುರಾಣಿಕ ಹೇಳಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 8ರಂದು ಬೆಳಗ್ಗೆ 7:30ಕ್ಕೆ ಶ್ರೋತೃಗಳೊಂದಿಗೆ ವಾಕಥಾನ್ ಆಯೋಜಿಸಲಾಗಿದೆ.
ಆಕಾಶವಾಣಿ ಕೇಂದ್ರದಿಂದ ಆರಂಭಗೊಳ್ಳುವ ವಾಕಥಾನ್ ಧಾರವಾಡ ಕೆಸಿಡಿ ವೃತ್ತ, ಎಲ್‌ಐಸಿ ಕಚೇರಿ ಮೂಲಕ ಜುಬಿಲಿ ವೃತ್ತಕ್ಕೆ ಬಂದು ಅಲ್ಲಿಂದ ಮರಳಿ ಆಕಾಶವಾಣಿ ಕೇಂದ್ರದವರೆಗೆ ನಡೆಯಲಿದೆ. ವಾಕಥಾನ್‌ನಲ್ಲಿ ಭಾಗವಹಿಸುವವರಿಗೆ ಟೀ-ಶರ್ಟ್, ಕ್ಯಾಪ್ ನೀಡಲಾಗುವುದು.
ಧಾರವಾಡ ಕೇಂದ್ರದ ಅಭಿಯಾಂತ್ರಿಕ ವಿಭಾಗದ ಉಪ ಮಹಾನಿರ್ದೇಶಕ ಅರುಣ್ ಪ್ರಭಾಕರ್ ಹಾಗೂ ಮಂಜುಳಾ ಪುರಾಣಿಕ ವಾಕಥಾನ್‌ಗೆ ಚಾಲನೆ ನೀಡುವರು ಎಂದರು.
ಆಕಾಶವಾಣಿ ಗೌರವಶಾಲಿ ಪರಂಪರೆಯನ್ನು ಹಂಚಿಕೊಳ್ಳಲು ಹಾಗೂ ಜನರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಸಂಗೀತ ಸಂಜೆ ಆಯೋಜಿಸಲಾಗಿದೆ.
ಮೇ 11ರಂದು ಸಂಜೆ 6:30ಕ್ಕೆ ಧಾರವಾಡ ನಗರದ ಆಲೂರ ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಸಂಗೀತ ಸುಧೆ ನಡೆಯಲಿದೆ. ಕೃತಿಕಾ ಜಂಗಿನಮಠ ಅವರಿಂದ ಕೊಳಲು ವಾದನ ನಡೆಯಲಿದ್ದು, ರಘುನಂದನ್ ಹೂಗಾರ ತಬಲಾ ಸಾಥ್ ನೀಡುವರು.
ರಘುನಂದನ್ ಭಟ್ ಅವರಿಂದ ಗಾಯನ ನಡೆಯಲಿದ್ದು, ಶರಣಪ್ಪ ಗುತ್ತರಗಿ ತಬಲಾ ಹಾಗೂ ಅಶ್ವಿನ್ ವಲಾವಲರ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ವಿಶ್ವನಾಥರಾವ ದೇಶಪಾಂಡೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಚಾರ್ಯ ಡಾ. ವಾದಿರಾಜ ಕುಲಕರ್ಣಿ ಆಗಮಿಸುವರು ಎಂದರು.
1936ರ ಜೂನ್ 8ರಂದು ಭಾರತೀಯ ರಾಷ್ಟ್ರೀಯ ಪ್ರಸಾರ ಸೇವೆ ಆಲ್ ಇಂಡಿಯಾ ರೇಡಿಯೋ ಎಂದು ಮರು ನಾಮಕರಣದೊಂದಿಗೆ ಕಾರ್ಯಾರಂಭ ಮಾಡಿತು. ಆಕಾಶವಾಣಿ ಧಾರವಾಡ ಕೇಂದ್ರ 76ನೇ ವರ್ಷ ಹಾಗೂ ಪ್ರಾದೇಶಿಕ ಸುದ್ದಿ ವಿಭಾಗ 44ನೇ ವರ್ಷಕ್ಕೆ ಕಾಲಿಟ್ಟಿದೆ.
ಆಕಾಶವಾಣಿಯ ನಾಲ್ಕು ಗೋಡೆಗಳಿಂದ ಹೊರಹೊಮ್ಮಿದ ಪ್ರತಿಧ್ವನಿಗಳು ಅಂದಿನಿಂದ ಕಾಲಾತೀತ, ಆತ್ಮೀಯ ಮತ್ತು ಅವಿಸ್ಮರಣೀಯವಾಗಿ ಉಳಿದಿರುವ ರಾಷ್ಟ್ರವನ್ನು ರೂಪಿಸಿವೆ ಎಂದರು.
ಪ್ರಸಾರ ಭಾರತಿ ಸಾರಥ್ಯದ ಆಕಾಶವಾಣಿ 591 ಕೇಂದ್ರಗಳನ್ನು ನಿರ್ವಹಿಸುತ್ತಿದ್ದು, ದೇಶದ ಜನಸಂಖ್ಯೆಯ ಶೇ.98ರಷ್ಟು ಜನರನ್ನು ತಲುಪುತ್ತಿದೆ. 23 ಭಾಷೆಗಳು ಮತ್ತು 146 ಉಪಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ.
ಆಕಾಶವಾಣಿಯ ಬಾಹ್ಯ ಸೇವೆಗಳ ಪ್ರಸಾರ ವಿಭಾಗ 100ಕ್ಕೂ ಹೆಚ್ಚು ದೇಶಗಳಿಗೆ ತನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಹಾಗೂ ಓಟಿಟಿ ವೇದಿಕೆ, ನ್ಯೂಸ್ ಆನ್ ಏರ್ ಆಪ್‌ಗಳಲ್ಲಿ ವಿಶ್ವದ ಮೂಲೆ ಮೂಲೆಗಳನ್ನು ಸಕಾಲಕ್ಕೆ ತಲುಪುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಧಾರವಾಡ ಆಕಾಶವಾಣಿ ಕೇಂದ್ರದ ಉಪ ಮಹಾನಿರ್ದೇಶಕ ಅರುಣ್ ಪ್ರಭಾಕರ್, ಕಾರ್ಯಕ್ರಮ ನಿರ್ವಹಣಾ ಅಧಿಕಾರಿ ಕುಮಾರ ಅಗಡಿ, ಮಾಯಾ ರಾಮನ್ ಇದ್ದರು.
Kshetra Samachara
06/05/2026 04:43 pm