ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ 'ಮೆಲೋಡಿ' ಗಿಫ್ಟ್‌ ಮಾಯೆ! ಪಾರ್ಲೆ ಷೇರುಗಳಲ್ಲಿ ಶೇ.5ರಷ್ಟು ಜಿಗಿತ! ನಿಜ ಕಾರಣವೇನು?

ಬೆಂಗಳೂರು : ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುವ ಟ್ರೆಂಡ್‌ಗಳು ಷೇರು ಮಾರುಕಟ್ಟೆಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದಕ್ಕೆ ಈಗ ಮತ್ತೊಂದು ವಿಲಕ್ಷಣ ಉದಾಹರಣೆ ಸಿಕ್ಕಿದೆ.

ಇಟಲಿ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ 'ಮೆಲೋಡಿ' ಚಾಕೊಲೇಟ್ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡಿದ ವಿಡಿಯೋ ವ್ಯಾಪಕವಾಗಿ ವೈರಲ್ ಆಗುತ್ತಿದ್ದಂತೆ, ಷೇರು ಮಾರುಕಟ್ಟೆಯಲ್ಲಿ 'ಪಾರ್ಲೆ ಇಂಡಸ್ಟ್ರೀಸ್' (Parle Industries) ಕಂಪನಿಯ ಷೇರುಗಳು ದಿಢೀರ್ ಶೇಕಡಾ 5ರಷ್ಟು ಏರಿಕೆ ಕಂಡಿವೆ.

ಆದರೆ, ಈ ಭರ್ಜರಿ ಏರಿಕೆಯ ಹಿಂದೆ ಚಿಲ್ಲರೆ ಹೂಡಿಕೆದಾರರ ಗೊಂದಲ ಮತ್ತು ಒಂದು ದೊಡ್ಡ ತಪ್ಪು ತಿಳುವಳಿಕೆ ಅಡಗಿದೆ.

'ಮೆಲೋಡಿ' ಟ್ರೆಂಡ್‌ ಮತ್ತು ಮೋದಿ ಉಡುಗೊರೆ

ಇಟಲಿಯಲ್ಲಿ ನಡೆದ ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಜಾರ್ಜಿಯಾ ಮೆಲೋನಿ ನಡುವಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಮೆಲೋನಿ ಅವರಿಗೆ 'ಮೆಲೋಡಿ' ಚಾಕೊಲೇಟ್ ಪ್ಯಾಕೆಟ್ ನೀಡುತ್ತಿರುವುದು ಸೆರೆಯಾಗಿತ್ತು.

ಇಂಟರ್ನೆಟ್‌ನಲ್ಲಿ ಈ ಇಬ್ಬರು ನಾಯಕರ ಹೆಸರನ್ನು ಸೇರಿಸಿ ಸೃಷ್ಟಿಸಲಾಗಿರುವ ಜನಪ್ರಿಯ "#Melodi" ಟ್ರೆಂಡ್‌ಗೆ ಪೂರಕವಾಗಿ ಮೋದಿ ಈ ಉಡುಗೊರೆ ನೀಡಿದ್ದಾರೆ ಎಂದು ನೆಟ್ಟಿಗರು ಚರ್ಚೆ ಆರಂಭಿಸಿದ್ದರು. ಬಳಿಕ ಪ್ರಧಾನಿ ಮೆಲೋನಿ ಅವರೂ ಈ ವಿಡಿಯೋವನ್ನು ತಮ್ಮ 'ಎಕ್ಸ್' (X) ಖಾತೆಯಲ್ಲಿ ಹಂಚಿಕೊಂಡಿದ್ದರು.

ಅಸಲಿ 'ಮೆಲೋಡಿ' ಯಾರು ತಯಾರಿಸುತ್ತಾರೆ?

ಇಲ್ಲಿ ಹೂಡಿಕೆದಾರರು ಗಮನಿಸಲೇಬೇಕಾದ ಅಸಲಿ ಟ್ವಿಸ್ಟ್ ಏನೆಂದರೆ, ಷೇರು ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡಿರುವ 'ಪಾರ್ಲೆ ಇಂಡಸ್ಟ್ರೀಸ್' ಕಂಪನಿಗೂ ಮತ್ತು ನಾವು ಇಷ್ಟಪಟ್ಟು ತಿನ್ನುವ 'ಮೆಲೋಡಿ' ಚಾಕೊಲೇಟ್‌ಗೂ ಯಾವುದೇ ವ್ಯಾಪಾರ ಸಂಬಂಧವೇ ಇಲ್ಲ!

ವಾಸ್ತವವಾಗಿ, 'ಮೆಲೋಡಿ' ಚಾಕೊಲೇಟ್ ಅನ್ನು ತಯಾರಿಸುವುದು ಭಾರತದ ಖ್ಯಾತ ಎಫ್‌ಎಂಸಿಜಿ (FMCG) ದೈತ್ಯ ಸಂಸ್ಥೆಯಾದ 'ಪಾರ್ಲೆ ಪ್ರಾಡಕ್ಟ್ಸ್' (Parle Products). 'ಪಾರ್ಲೆ-ಜಿ' (Parle-G), 'ಮೊನಾಕೊ', 'ಕ್ರಾಕ್‌ಜಾಕ್', 'ಮ್ಯಾಂಗೋ ಬೈಟ್' ಮತ್ತು 'ಪಾಪಿನ್ಸ್'‌ನಂತಹ ಜನಪ್ರಿಯ ಬ್ರ್ಯಾಂಡ್‌ಗಳನ್ನು ಉತ್ಪಾದಿಸುವ 'ಪಾರ್ಲೆ ಪ್ರಾಡಕ್ಟ್ಸ್' ಒಂದು ಖಾಸಗಿ ಲಿಮಿಟೆಡ್ ಕಂಪನಿಯಾಗಿದ್ದು ಇದು ಷೇರು ಮಾರುಕಟ್ಟೆಯಲ್ಲಿ ಇಲ್ಲಿಯವರೆಗೂ ಲಿಸ್ಟ್ ಆಗಿಯೇ ಇಲ್ಲ.

ಗೊಂದಲದಿಂದಾದ ಷೇರು ಏರಿಕೆ

ಬಿಎಸ್‌ಇ (BSE) ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ 'ಪಾರ್ಲೆ ಇಂಡಸ್ಟ್ರೀಸ್' ಸಂಪೂರ್ಣವಾಗಿ ಬೇರೆಯದೇ ಆದ ಒಂದು ಕಂಪನಿಯಾಗಿದೆ. ಕೇವಲ ಹೆಸರಿನಲ್ಲಿ 'ಪಾರ್ಲೆ' ಎಂಬ ಪದವಿರುವುದನ್ನು ನೋಡಿ ಗೊಂದಲಕ್ಕೊಳಗಾದ ಚಿಲ್ಲರೆ ಹೂಡಿಕೆದಾರರು ಮತ್ತು ಟ್ರೇಡರ್‌ಗಳು, ವೈರಲ್ ಟ್ರೆಂಡ್ ಬೆನ್ನತ್ತಿ ಈ ಕಂಪನಿಯ ಷೇರುಗಳನ್ನು ಖರೀದಿಸಲು ಮುಗಿಬಿದ್ದಿದ್ದೇ ಷೇರು ಬೆಲೆ ಏರಿಕೆಗೆ ಅಸಲಿ ಕಾರಣ.

ಮಂಗಳವಾರದ ವಹಿವಾಟಿನಲ್ಲಿ 'ಪಾರ್ಲೆ ಇಂಡಸ್ಟ್ರೀಸ್' ಸಂಸ್ಥೆಯ ಷೇರುಗಳು ಇಂಟ್ರಾಡೇನಲ್ಲಿ ಶೇ. 5ರಷ್ಟು ಜಿಗಿದು 5.25 ರೂಪಾಯಿಗೆ ತಲುಪಿದ್ದವು. ಕಳೆದ ಒಂದು ವಾರದಲ್ಲೂ ಈ ಪೆನ್ನಿ ಸ್ಟಾಕ್ ಬರೋಬ್ಬರಿ ಶೇ. 7ರಷ್ಟು ಲಾಭ ತಂದುಕೊಟ್ಟಿದೆ.

Edited By : Abhishek Kamoji
PublicNext

PublicNext

20/05/2026 05:13 pm

Cinque Terre

18.91 K

Cinque Terre

0

ಸಂಬಂಧಿತ ಸುದ್ದಿ