ರಾಜಸ್ಥಾನದ ಅಲ್ವಾರ್‌ನಲ್ಲಿ ಹೃದಯ ಕಲಕುವ ಘಟನೆಯೊಂದು ನಡೆದಿದೆ. ಆಟವಾಡುತ್ತಾ ಕಾರಿನೊಳಗೆ ಹೋದ ಇಬ್ಬರು ಪುಟ್ಟ ಸಹೋದರಿಯರು, ಬಾಗಿಲು ಲಾಕ್ ಆಗಿ ಹೊರಬರಲಾರದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಅಲ್ವಾರ್‌ನ ಖುದನ್‌ಪುರಿ ಗ್ರಾಮದಲ್ಲಿ 8 ವರ್ಷದ ಟೀನಾ ಮತ್ತು 5 ವರ್ಷದ ಲಕ್ಷ್ಮಿ ಎಂಬ ಇಬ್ಬರು ಹೆಣ್ಣುಮಕ್ಕಳು ಕಾರಿನೊಳಗೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಹೌದು ಬುಧವಾರ ಬೆಳಗ್ಗೆ ಮನೆಯ ಸಮೀಪದ ಗ್ಯಾರೇಜ್‌ನಲ್ಲಿ ರಿಪೇರಿಗಾಗಿ ನಿಲ್ಲಿಸಲಾಗಿದ್ದ ಹಳೆಯ ಕೆಂಪು ಕಾರಿನ ಬಳಿ ಟೀನಾ ಮತ್ತು ಲಕ್ಷ್ಮಿ ಆಟವಾಡುತ್ತಿದ್ದರು. ಆಟದ ಹುಮ್ಮಸ್ಸಿನಲ್ಲಿ ಮಕ್ಕಳು ಕಾರಿನ ಮುಂಭಾಗದ ಬಾಗಿಲು ತೆರೆದು ಒಳಗೆ ಕುಳಿತಿದ್ದಾರೆ. ಆದರೆ, ಒಳಗೆ ಕುಳಿತ ತಕ್ಷಣ ಕಾರಿನ ಬಾಗಿಲು ಭದ್ರವಾಗಿ ಮುಚ್ಚಿಕೊಂಡಿದೆ. ಕಡು ಬಿಸಿಲು ಮತ್ತು ಬ್ಯಾಟರಿ ಇಲ್ಲದ ಕಾರಣ ಕಾರಿನೊಳಗೆ ಗಾಳಿಯ ಕೊರತೆಯುಂಟಾಗಿ ಮಕ್ಕಳು ಉಸಿರಾಡಲು ತೀವ್ರವಾಗಿ ಒದ್ದಾಡಿದ್ದಾರೆ. ಒಳಗಿನಿಂದ ಬಾಗಿಲು ತೆರೆಯಲು ಸಾಧ್ಯವಾಗದೆ, ಇಬ್ಬರೂ ಕಾರಿನೊಳಗೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ಮಕ್ಕಳ ತಂದೆ ರಮೇಶ್ ಸಲೂನ್ ನಡೆಸುತ್ತಿದ್ದು, ನಾಲ್ಕು ವರ್ಷಗಳ ಹಿಂದೆಯಷ್ಟೇ ಅವರ ಪತ್ನಿ ಹೃದಯಾಘಾತದಿಂದ ನಿಧನರಾಗಿದ್ದರು. ಅಂದಿನಿಂದ ರಮೇಶ್ ಅವರೇ ತಾಯಿಯೂ, ತಂದೆಯೂ ಆಗಿ ಈ ಇಬ್ಬರು ಹೆಣ್ಣುಮಕ್ಕಳನ್ನು ಅಪಾರ ಪ್ರೀತಿಯಿಂದ ಸಾಕಿ ಬೆಳೆಸುತ್ತಿದ್ದರು.
ಬುಧವಾರ ಮಧ್ಯಾಹ್ನ ಊಟದ ಸಮಯಕ್ಕೆ ರಮೇಶ್ ಮನೆಗೆ ಬಂದಾಗ ಮಕ್ಕಳು ಕಾಣಿಸಲಿಲ್ಲ. ಆತಂಕಗೊಂಡು ಸುತ್ತಮುತ್ತ ಹುಡುಕಾಡಿದಾಗ, ಗ್ಯಾರೇಜ್‌ನಲ್ಲಿದ್ದ ಕಾರಿನೊಳಗೆ ಮಕ್ಕಳಿಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಸ್ಥಳೀಯರ ನೆರವಿನಿಂದ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ತಡವಾಗಿತ್ತು. ಮಕ್ಕಳು ಉಸಿರುಗಟ್ಟಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
"ನನ್ನ ಹೆಂಡತಿ ಹೋದಮೇಲೆ ಈ ಇಬ್ಬರು ಮಕ್ಕಳೇ ನನ್ನ ಜಗತ್ತಾಗಿದ್ದರು. ಇವರನ್ನು ಎಷ್ಟು ಪ್ರೀತಿಯಿಂದ, ಜಾಗರೂಕತೆಯಿಂದ ಸಾಕಿ ಸಲಹಿದ್ದೆ... ಈಗ ನನ್ನನ್ನು ಒಂಟಿ ಮಾಡಿ ಇಬ್ಬರೂ ಒಟ್ಟಿಗೇ ಹೊರಟುಹೋದರಲ್ಲಾ," ಎಂದು ಮಕ್ಕಳ ಶವದ ಮುಂದೆ ತಂದೆ ರಮೇಶ್ ಕಣ್ಣೀರಿಡುತ್ತಿದ್ದ ದೃಶ್ಯ ನೆರೆದಿದ್ದ ಸ್ಥಳೀಯರ ಕರುಳನ್ನು ಹಿಂಡುವಂತಿತ್ತು. ಈ ದೃಶ್ಯ ನೋಡಿ ಅಲ್ಲಿದ್ದವರ ಕಣ್ಣುಗಳು ತೇವಗೊಂಡವು.
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿರುವ ವೈಶಾಲಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಕ್ಕಳು ಆಟವಾಡುತ್ತಾ ಕಾರಿನೊಳಗೆ ಹೋಗುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
21/05/2026 08:13 am