ವಾಷಿಂಗ್ಟನ್: ಇರಾನ್ ವಿರುದ್ಧ ನಡೆದ ಯುದ್ಧದಲ್ಲಿ ಅಮೆರಿಕ ಭಾರಿ ನಷ್ಟ ಅನುಭವಿಸಿದೆ. ಈ ಸಂಘರ್ಷದ ವೇಳೆ ಅಮೆರಿಕ ವಾಯುಪಡೆಗೆ ಸೇರಿದ ಅತ್ಯಾಧುನಿಕ ಫೈಟರ್ ಜೆಟ್‌ಗಳು ಮತ್ತು ಡ್ರೋನ್‌ಗಳು ಸೇರಿದಂತೆ ಕನಿಷ್ಠ 42 ಮಿಲಿಟರಿ ವಿಮಾನಗಳು ನಾಶವಾಗಿವೆ ಎಂದು ಅಮೆರಿಕದ ಸಂಸತ್ತಿನ (Congressional Research Service - CRS) ಅಧಿಕೃತ ವರದಿ ಬಹಿರಂಗಪಡಿಸಿದೆ.
ಫೆಬ್ರವರಿ 28ರಂದು ಇರಾನ್ ಗುರಿಯಾಗಿಸಿಕೊಂಡು ಜಂಟಿಯಾಗಿ ಆರಂಭಿಸಲಾಗಿದ್ದ 'ಆಪರೇಷನ್ ಎಪಿಕ್ ಫ್ಯೂರಿ' (Operation Epic Fury) ಕಾರ್ಯಾಚರಣೆಯ ವೇಳೆ ಈ ಹಾನಿ ಸಂಭವಿಸಿದೆ ಎಂದು ವರದಿ ಹೇಳಿದೆ.
ವರದಿಯ ಪ್ರಕಾರ, ಹಾನಿಗೊಳಗಾದ ಅಥವಾ ನಾಶವಾದ 42 ವಿಮಾನಗಳಲ್ಲಿ ಅಮೆರಿಕದ ಅತ್ಯಂತ ದುಬಾರಿ ಮತ್ತು ಅತ್ಯಾಧುನಿಕ ಯುದ್ಧ ವಿಮಾನಗಳೂ ಸೇರಿವೆ. ಅವುಗಳ ವಿವರ ಇಲ್ಲಿದೆ:
ಸ್ಟಿಲ್ತ್ ಫೈಟರ್ ಜೆಟ್: 1 F-35A ಲೈಟ್ನಿಂಗ್ II (ಇತಿಹಾಸದಲ್ಲೇ ಮೊದಲ ಬಾರಿಗೆ F-35 ಜೆಟ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಇರಾನ್ ಪ್ರತಿಪಾದಿಸಿದೆ).
ಫೈಟರ್ ಜೆಟ್‌ಗಳು: 4 F-15E ಸ್ಟ್ರೈಕ್ ಈಗಲ್ ಮತ್ತು 1 A-10 ಥಂಡರ್‌ಬೋಲ್ಟ್ II ದಾಳಿ ವಿಮಾನ.
ಡ್ರೋನ್‌ಗಳು: 24 MQ-9 ರೀಪರ್ ಡ್ರೋನ್‌ಗಳು ಹಾಗೂ 1 MQ-4C ಟ್ರೈಟಾನ್ ಡ್ರೋನ್.
ಇತರ ವಿಮಾನಗಳು: 7 KC-135 ರಿಫ್ಯುಯೆಲಿಂಗ್ ಟ್ಯಾಂಕರ್‌ಗಳು, 1 E-3 ಸೆಂಟ್ರಿ ಅವಾಕ್ಸ್ (AWACS), 2 MC-130J ವಿಶೇಷ ಕಾರ್ಯಾಚರಣೆ ವಿಮಾನಗಳು ಮತ್ತು 1 HH-60W ಹೆಲಿಕಾಪ್ಟರ್.
29 ಬಿಲಿಯನ್ ಡಾಲರ್‌ಗೆ ಏರಿದ ಯುದ್ಧದ ವೆಚ್ಚ:
ಈ ಯುದ್ಧದಿಂದಾಗಿ ಅಮೆರಿಕದ ಸೇನಾ ಕಾರ್ಯಾಚರಣೆಯ ವೆಚ್ಚ ಬರೋಬ್ಬರಿ 29 ಬಿಲಿಯನ್ ಯುಎಸ್ ಡಾಲರ್ (ಸುಮಾರು ₹2.4 ಲಕ್ಷ ಕೋಟಿ ರೂ.) ಗೆ ಏರಿಕೆಯಾಗಿದೆ ಎಂದು ಪೆಂಟಗನ್‌ನ ಹಂಗಾಮಿ ಕಾಂಪ್ಟ್ರೋಲರ್ ಜೂಲ್ಸ್ ಡಬ್ಲ್ಯೂ. ಹರ್ಸ್ಟ್ ತಿಳಿಸಿದ್ದಾರೆ. ನಾಶವಾದ ಉಪಕರಣಗಳ ರಿಪೇರಿ ಮತ್ತು ಮರು-ಖರೀದಿಯ ಕಾರಣದಿಂದಾಗಿ ಈ ವೆಚ್ಚ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ.
ಇರಾನ್ ಪ್ರತಿಕ್ರಿಯೆ:
ಈ ವರದಿಗೆ ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಗ್ಚಿ, "ಕೋಟಿಗಟ್ಟಲೆ ಡಾಲರ್ ಮೌಲ್ಯದ ಡಜನ್‌ಗಟ್ಟಲೆ ವಿಮಾನಗಳನ್ನು ಕಳೆದುಕೊಂಡಿರುವುದನ್ನು ಅಮೆರಿಕ ಕಾಂಗ್ರೆಸ್ ಕೊನೆಗೂ ಒಪ್ಪಿಕೊಂಡಿದೆ. ನಮ್ಮ ಸಶಸ್ತ್ರ ಪಡೆಗಳು ಅಮೆರಿಕ ಹೆಮ್ಮೆಪಡುವ F-35 ಜೆಟ್ ಅನ್ನು ಹೊಡೆದುರುಳಿಸಿ ಇತಿಹಾಸ ಸೃಷ್ಟಿಸಿವೆ" ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
PublicNext
21/05/2026 05:23 pm