ಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನಿಂದ ತೆರಳಿದ ಆಳಸಮುದ್ರ ಬೋಟು ರಾತ್ರಿ ವೇಳೆ ಕೋಡಿಬೆಂಗ್ರೆ ಸಮೀಪ ಮುಳುಗಡೆಗೊಂಡಿದ್ದು ಅದರಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಬೋಟಿನ ತಾಂಡೇಲ ಉತ್ತರ ಕನ್ನಡ ಜಿಲ್ಲೆಯ ರಾಘವೇಂದ್ರ, ಕಾರ್ಮಿಕರಾದ ರೋಹಿದಾಸ್ ಮೊಗೇರ, ಶಾಮ ಸುಂದರ್ ಮಲಿಕ್, ಉಜ್ವಲ್ ಮಲಿಕ್, ಸತ್ಯಜಿತ್ ಮಲಿಕ್, ತ್ರಿಲೇಶ್ ಭಾಸ್ಕರ್ ರಕ್ಷಿಸಲ್ಪಟ್ಟ ಮೀನುಗಾರರು.ಕಿದಿಯೂರು ಪಡುಕರೆಯ ಸಂದೀಪ್ ಕುಮಾರ್ ಎಂಬವರಿಗೆ ಸೇರಿದ ಸಾಯಿದತ್ತ ಆಳಸಮುದ್ರ ಬೋಟು ಮೇ 17ರಂದು ರಾತ್ರಿ 10-30ಕ್ಕೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು.
ಹಿಂದಿರುಗುವ ವೇಳೆ ಬೋಟಿನ ಹಿಂಭಾಗದ ಅಡಿಭಾಗಕ್ಕೆ ಯಾವುದೋ ವಸ್ತು ತಾಗಿದ ಶಬ್ದ ಕೇಳಿ ಬಂತು. ಈ ವೇಳೆ ತಾಂಡೇಲ ರಾಘವೇಂದ್ರ ಬೋಟಿನ ಒಳಗೆ ಕೆಳಗಿಳಿದು ನೋಡಿದಾಗ ನೀರು ಒಳ ಬರುತ್ತಿರುವುದು ಕಂಡು ಬಂತು.ತಕ್ಷಣ ಸಮೀಪದಲ್ಲಿರುವ ಬೋಟ್ ಶ್ರೀಅಮ್ಮಭವಾನಿ ಬೋಟಿನ ಸಹಾಯ ಪಡೆದು ಬೋಟಿನೊಳಗೆ ತುಂಬುತ್ತಿದ್ದ ನೀರನ್ನು ಖಾಲಿ ಮಾಡಲು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ.
ಬೋಟಿನಲ್ಲಿದ್ದ ಎಲ್ಲ ಮೀನುಗಾರರನ್ನು ತಮ್ಮ ಬೋಟಿಗೆ ಹತ್ತಿಸಿ, ಮುಳುಗಡೆಗೊಳ್ಳುತ್ತಿರುವ ಬೋಟನ್ನು ಮಲ್ಪೆ ಬಂದರಿಗೆ ಎಳೆದು ತರುವಾಗ ಅಮ್ಮ ಭವಾನಿ ಬೋಟಿನ ಹಿಂಭಾಗದ ಕಂಬ ತುಂಡಾಗಿ ಬೋಟು ಸುಮಾರು 11 ಗಂಟೆ ವೇಳೆಗೆ ಸಂಪೂರ್ಣವಾಗಿ ಮುಳುಗಡೆ ಗೊಂಡಿತು. ಬೋಟಿನಲ್ಲಿದ್ದ ಮೀನು, ಬಲೆ, ಡೀಸೆಲ್ ಸೇರಿದಂತೆ ಸುಮಾರು 65 ಲಕ್ಷ ರೂ.ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
Kshetra Samachara
21/05/2026 11:21 am
LOADING...