ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆಗಳ ಹೂಳೆತ್ತುವ ಕಾರ್ಯ ನಡೆಯುತ್ತಿದ್ದು, ತೆರವುಗೊಳಿಸಿದ ತ್ಯಾಜ್ಯವನ್ನು ಆಯಾ ದಿನವೇ ಸ್ಥಳದಿಂದ ವಿಲೇವಾರಿ ಮಾಡಬೇಕು ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಸೂಚನೆ ನೀಡಿದ್ದಾರೆ.
ಮಂಗಳೂರು ಮನಪಾ ಮಂಗಳಾ ಸಭಾಂಗಣದಲ್ಲಿ ಮಂಗಳವಾರ ನಡೆದ ಮುಂಗಾರು ಪೂರ್ವಸಿದ್ಧತೆ ಸಭೆಯಲ್ಲಿ ಅಧಿಕಾರಿಗಳಿಗೆ ಈ ಸೂಚನೆ ನೀಡಿದ್ದಾರೆ.ಮುಂಗಾರು ಇನ್ನೇನು ಕೆಲವೇ ದಿನಗಳಲ್ಲಿ ಕರಾವಳಿಗೆ ಪ್ರವೇಶಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಹೂಳೆತ್ತುವ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ರಾಜಕಾಲುವೆಗಳಿಂದ ಕನಿಷ್ಠ ಎರಡು ಅಡಿಯಷ್ಟು ಹೂಳು ತೆಗೆಯಬೇಕು. ತೆಗೆದ ಹೂಳು ಮತ್ತು ಚರಂಡಿಗೆ ಸೇರದಂತೆ ಕ್ರಮ ವಹಿಸಬೇಕು. ಜೊತೆಗೆ ಮರಗಳ ರೆಂಬೆ ತೆರವು ಸಹಿತ ಅಗತ್ಯ ಕಾರ್ಯಗಳನ್ನು ಮುಗಿಸಬೇಕು ಎಂದವರು ನಿರ್ದೇಶನ ನೀಡಿದರು.ಕೊಟ್ಟಾರಚೌಕಿ ಸಹಿತ ಹಲವು ಕಡೆಗಳಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಲಾಗಿದೆ.
ಕೊಟ್ಟಾರ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಜಕಾಲುವೆಯ ಕೆಲವು ಭಾಗಗಳಲ್ಲಿ ಹೂಳೆತ್ತುವ ಯಂತ್ರ ಸಾಗಲು ಜಾಗವಿಲ್ಲ. ಹೂಳು ಮೇಲೆತ್ತಿ ಹಾಕಲು ಸ್ಥಳವಿಲ್ಲವಾಗಿದ್ದು, ಈ ಬಗ್ಗೆ ಪಾಲಿಕೆ ಕ್ರಮ ವಹಿಸಬೇಕು ಎಂದು ಸುರೇಶ್ ಉಡುಪ ಎಂಬವರು ಸಭೆಯಲ್ಲಿ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಆಯುಕ್ತರು, ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿದ್ದಲ್ಲಿ ತೆರವಿಗೆ ನೋಟಿಸ್ ನೀಡುವ ಅಗತ್ಯ ವಿಲ್ಲ. ಆದರೂ ಅಧಿಕಾರಿಗಳು ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಸೂಚಿಸಿದರು.ಪಂಪ್‌ವೆಲ್ ರಾಜಕಾಲುವೆಯಿಂದಾಗಿ ಕೃತಕ ನೆರೆ ಸೃಷ್ಟಿಯಾಗುತ್ತಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದವರು ಹೇಳಿದರು.
ಸುಲ್ತಾನ್ ಬತ್ತೇರಿ- ತಣ್ಣೀರುಬಾವಿ ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಫಲ್ಗುಣಿ ನದಿಗೆ ಮಣ್ಣು ಹಾಕಿರುವುದರಿಂದ ಮಳೆಗಾಲದಲ್ಲಿ ಸಹಜ ನೀರಿನ ಹರಿವಿಗೆ ತೊಂದರೆಯಾಗಲಿದೆ. ಮಣ್ಣು ತೆರವುಗೊಳಿಸದೇ ಇದ್ದಲ್ಲಿ ಅಪಾಯವಾಗಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದಾಗ, ಸ್ಮಾರ್ಟ್‌ಸಿಟಿ ಅಧಿಕಾರಿಗಳ ಜೊತೆ ಚರ್ಚಿಸಿ ತೆರವುಗೊಳಿಸಲು ಸೂಚಿಸಲಾಗುವುದು ಎಂದು ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದರು.
Kshetra Samachara
22/05/2026 08:08 am