ನಂಜನಗೂಡು: ಇತಿಹಾಸ ಪ್ರಸಿದ್ಧ ಶ್ರೀ ಅಂಕನಾಥೇಶ್ವರ ದೇವಾಲಯದ ಹುಂಡಿ ಮೂಲೆ ಸೇರಿದ್ದು, ದೇವಾಲಯದ ಹುಂಡಿಗೆ ಹೋಗಬೇಕಿದ್ದ ಕಾಣಿಕೆ ಪೂಜಾರಿಗಳ ತಟ್ಟೆಗೆ ಸೇರುತ್ತಿದ್ದು, ಸರ್ಕಾರಕ್ಕೆ ಪಂಗನಾಮ ಹಾಕಿ ಸ್ವಾಹಾ ಮಾಡಲಾಗಿದೆ.
ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದ ಶ್ರೀ ಅಂಕನಾಥೇಶ್ವರ ದೇವಾಲಯದಲ್ಲಿ ಹುಂಡಿ ನಾಪತ್ತೆಯಾಗಿದೆ.
ತಗಡೂರಿನ ಶ್ರೀ ಅಂಕನಾಥೇಶ್ವರ ದೇವಾಲಯವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ಕಳೆದ ಒಂದು ವರ್ಷದಿಂದಲೂ ಹುಂಡಿಯನ್ನು ಮೂಲೆಗೆ ಎಸೆಯಲಾಗಿದೆ. ಅಮಾವಾಸ್ಯೆ, ಹುಣ್ಣಿಮೆ ಮತ್ತು ಹಬ್ಬಗಳು ಸೇರಿದಂತೆ ಪ್ರತಿ ಭಾನುವಾರ ಶ್ರೀ ಅಂಕನಾಥೇಶ್ವರ ಸ್ವಾಮಿ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರಿಗೆ ಕಾಣಿಕೆ ರೂಪದಲ್ಲಿ ಹುಂಡಿಗೆ ಹಣ ಹಾಕುತ್ತಿದ್ದರು. ಆದರೆ, ಸುಮಾರು ಒಂದು ವರ್ಷದಿಂದ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ಕಾಮಗಾರಿ ಪ್ರಾರಂಭ ಮಾಡಲಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ದೇವಾಲಯದಲ್ಲಿದ್ದ ಹುಂಡಿಯನ್ನು ಎತ್ತಂಗಡಿ ಮಾಡಿ ಮೂಲೆ ಸೇರಿಸಿದ್ದಾರೆ.
ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಹಣ ಪೂಜಾರಿಗಳ ಜೇಬು ಸೇರಿದೆ. ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿರುವುದರಿಂದ ಗೋಲಕವನ್ನು ತೆಗೆದು ಹಾಕಲಾಗಿದೆ ಎಂದು ನೆಪ ಹೇಳುತ್ತಿದ್ದಾರೆ. ಪ್ರತಿ ತಿಂಗಳು ಒಂದು ಲಕ್ಷಕ್ಕೂ ಹೆಚ್ಚು ಆದಾಯವನ್ನು ಗಳಿಸುತ್ತಿದ್ದನ್ನು ಕಾಣಬಹುದು. ಕಳೆದ ಒಂದು ವರ್ಷದಿಂದ ಹುಂಡಿ ಇಲ್ಲದೆ ಸರ್ಕಾರಕ್ಕೆ ಹೋಗಬೇಕಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಪಂಗನಾಮ ಹಾಕಲಾಗಿದೆ.
ಸುಮಾರು 20 ಪೂಜಾರಿಗಳು ಸರದಿ ಸಾಲಿನಂತೆ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಎನ್ನಲಾಗಿದೆ. ದೇವಾಲಯವನ್ನು ಅಭಿವೃದ್ಧಿಪಡಿಸುವಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರ ಮೌನ ವಹಿಸಿದೆ. ಅಲ್ಲದೆ ದೇವಾಲಯದಲ್ಲಿ ಪ್ರತಿ ತಿಂಗಳು ಹುಂಡಿ ಕಳ್ಳತನ ಪ್ರಕರಣಗಳು ಸಾಕಷ್ಟು ನಡೆದಿವೆ. ಈ ಬಗ್ಗೆ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಪ್ರತಿ ವರ್ಷ ಗೌರಿ ಗಣೇಶ ಹಬ್ಬದ ಮಾರನೇ ದಿನ ಶ್ರೀ ಅಂಕನಾಥೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯುತ್ತದೆ. ಜಾತ್ರಾ ವೇಳೆಯೂ ಲಕ್ಷಾಂತರ ರೂಪಾಯಿ ಹಣವು ಮುಜರಾಯಿ ಇಲಾಖೆಗೆ ಹೋಗುತ್ತದೆ. ದೇವಾಲಯದಲ್ಲಿ ಯಾವುದೇ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಿಲ್ಲ. ದೇವಾಲಯಕ್ಕೆ ಯಾವುದೇ ಭದ್ರತೆ ಇಲ್ಲ.
ಇದರಿಂದ ದೇವಾಲಯವು ಅಭಿವೃದ್ಧಿ ಕಂಡಿಲ್ಲ. ಕೂಡಲೇ ಮುಜರಾಯಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಹುಂಡಿಯನ್ನು ಹಾಕಬೇಕು. ದೇವಾಲಯದಲ್ಲಿ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ.
PublicNext
22/05/2026 10:47 pm