ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡು: ತಾಲ್ಲೂಕು ಆಡಳಿತ ನಿಷ್ಕ್ರಿಯ; ಜೂನ್ 8 ರಂದು ಬೃಹತ್ ಬಾರುಕೋಲು ಚಳುವಳಿ

ನಂಜನಗೂಡು: ನಂಜನಗೂಡು ತಾಲ್ಲೂಕಿನ ಎಲ್ಲಾ ಗ್ರಾಮಗಳ ಸಮಗ್ರ ನೀರಾವರಿಗಾಗಿ ಹಾಗೂ ತಾಲ್ಲೂಕು ಆಡಳಿತದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ, ಜೂ.8 ರಂದು ನಂಜನಗೂಡಿನಲ್ಲಿ ಬೃಹತ್ ಬಾರುಕೋಲು ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್ ವಿದ್ಯಾಸಾಗರ್ ಹೇಳಿದರು.

ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಂಜನಗೂಡು ತಾಲ್ಲೂಕು ಘಟಕ, ದಲಿತ ಸಂಘಟನೆ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಬಾರುಕೋಲು ಚಳುವಳಿಯ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ತಾಲ್ಲೂಕು ಆಡಳಿತ ನಿಷ್ಕ್ರಿಯವಾಗಿದ್ದು, ರೈತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ ಇದನ್ನು ಖಂಡಿಸಿ, ಅಂದು ನಂಜನಗೂಡಿನ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ರೈತರು ಜಮಾಯಿಸಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ತಾಲ್ಲೂಕು ಆಡಳಿತ ಭವನದ ವರೆಗೆ ಬೃಹತ್ ಪಾದಯಾತ್ರೆ ನಡೆಸಿ, ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ. ತಾಲ್ಲೂಕು ಕಚೇರಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ರೈತರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆಯುತ್ತಾ ಬಂದಿದ್ದರೂ, ಅಧಿಕಾರಕ್ಕಾಗಿ ಜನಪ್ರತಿನಿಧಿಗಳು ಓಡಾಡುತ್ತಿದ್ದಾರೆ. ಹೊರತು ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಒಬ್ಬ ರೈತರ ಜಮೀನು ಖಾತೆಯಾಗಬೇಕು ಎಂದರೆ ಕನಿಷ್ಠ 3 ವರ್ಷ ಕಾಯಬೇಕು. ಹಣ ಕೊಟ್ಟರೆ ಸಾಕು ಒಂದೇ ದಿನಕ್ಕೆ ಎಲ್ಲಾ ಕೆಲಸಗಳು ಆಗುತ್ತವೆ. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅಧಿಕಾರಿಗಳು ಮಾಡುತ್ತಿಲ್ಲ. ಗಂಟೆ ಹೊಡೆದು, ಸಂಬಳ ತಗೋ ಅನ್ನೋ ರೀತಿ ಆಗಿದೆ. ಪ್ರಮುಖವಾಗಿ ಕಬಿನಿ, ಕಾವೇರಿ, ಲಕ್ಷ್ಮಣತೀರ್ಥ ಅಣೆಕಟ್ಟುಗಳಿದ್ದರೂ ಗ್ರಾಮೀಣ ಪ್ರದೇಶದ ರೈತರಿಗೆ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಪ್ರತಿ ವರ್ಷ ಕಬಿನಿ ಅಣೆಕಟ್ಟಿನಿಂದ ನೀರನ್ನು ತಮಿಳುನಾಡಿಗೆ ಬಿಡುವ ವ್ಯವಸ್ಥೆ ಇದೆ. ಆದರೆ, ನಮ್ಮ ಭಾಗದ ಕೆರೆಗಳಿಗೆ ವೈಜ್ಞಾನಿಕವಾಗಿ ನೀರು ತುಂಬಿಸುವ ವ್ಯವಸ್ಥೆ ಆಗುತ್ತಿಲ್ಲ. ಕೆರೆ ಒತ್ತುವರಿ ತೆರವುಗೊಳಿಸಬೇಕು. ತಾಲ್ಲೂಕಿನಲ್ಲಿ ಸಾಕಷ್ಟು ಹಳ್ಳಿಗಳಲ್ಲಿ ಕುಡಿಯುವ ನೀರಿನ ತೊಂದರೆ ಇದೆ. ಬಣ್ಣಾರಿ ಅಮ್ಮಾನ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಗೆ ಕನಿಷ್ಠ 4,500 ರೂಪಾಯಿಗಳನ್ನು ರೈತರ ಖಾತೆಗೆ ಜಮಾ ಮಾಡಬೇಕು. ಕಬ್ಬಿನ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ರೈತ ವಿರೋಧಿ ಭ್ರಷ್ಟ ಆಡಳಿತವನ್ನು ತೊಲಗಿಸಿ ರೈತಸ್ನೇಹಿ ಆಡಳಿತವನ್ನು ಕೊಡಬೇಕು. ಇಮ್ಮಾವು ಗ್ರಾಮದ ಉಳುಮೆ ಮಾಡುತ್ತಿರುವ ರೈತರಿಗೆ ಧನಾತ್ಮಕ ಪರಿಹಾರ ನೀಡಬೇಕು. ವಿದ್ಯುತ್ ಖಾಸಗೀಕರಣವನ್ನು ಕೈಬಿಡಬೇಕು. ಮಳೆ ಕೈ ಕೊಟ್ಟ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿ ಎಕರೆಗೆ ಕನಿಷ್ಠ 30 ಸಾವಿರ ರೂ.ಗಳ ಬರ ಪರಿಹಾರ ಘೋಷಣೆ ಮಾಡಬೇಕು.

ರೈತರು ಕೊಂಡುಕೊಳ್ಳುವ ರಸಗೊಬ್ಬರಕ್ಕೆ ಎಫ್ ಐಡಿ ಕಡ್ಡಾಯ ಮಾಡಿರುವುದನ್ನು ಕೈಬಿಡಬೇಕು. ರಸಗೊಬ್ಬರ, ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನು ಇಳಿಕೆ ಮಾಡಬೇಕು. ನಂಜನಗೂಡು ತಾಲ್ಲೂಕಿನ ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳೀಯ ಯುವಕ-ಯುವತಿಯರಿಗೆ ಖಾಯಂ ಉದ್ಯೋಗ ನೀಡಬೇಕು ಎಂದು ವಿವಿಧ ಹಕ್ಕೋತ್ತಾಯಗಳನ್ನು ಇಟ್ಟುಕೊಂಡು ಬೃಹತ್ ಬಾರುಕೋಲು ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಆದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಿಂಧುವಳ್ಳಿ ಸತೀಶ್ ರಾವ್, ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು, ಮಹದೇವ ನಾಯಕ, ಉಪಾಧ್ಯಕ್ಷ ಹೆಡತಲೆ ಶಂಕರನಾಯಕ, ಪ್ರಧಾನ ಕಾರ್ಯದರ್ಶಿ ಉಪ್ಪನಹಳ್ಳಿ ದೇವರಾಜ್, ಮಹಿಳಾ ಅಧ್ಯಕ್ಷೆ ಸವಿತಾ, ಪಟ್ಟಣ ಅಧ್ಯಕ್ಷ ಕತ್ವಾಡಿಪುರ ಶಿವಣ್ಣ, ಗೌರವಾಧ್ಯಕ್ಷ ಮಾದಪ್ಪ, ಮೋಹನ್, ವರದರಾಜು, ಸಿದ್ದಪ್ಪಾಜಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Edited By :
Kshetra Samachara

Kshetra Samachara

02/06/2026 08:36 pm

Cinque Terre

160

Cinque Terre

0

ಸಂಬಂಧಿತ ಸುದ್ದಿ