ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ದೆಹಲಿಯ ಹೊಟೇಲ್‌ನಲ್ಲಿ ಕುರ್ಚಿಗಾಗಿ ಜಗಳ - ಅಪ್ರಾಪ್ತನ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು!

ದೆಹಲಿಯಲ್ಲಿ ಗ್ಯಾಂಗ್‌ಸ್ಟರ್ ಸ್ಟೈಲ್ ಶೂಟೌಟ್! ಹೋಟೆಲ್‌ನಲ್ಲಿ ಕುರ್ಚಿ ತಗುಲಿದ್ದಕ್ಕೆ ಜಗಳ; ಯುವತಿ ಎದುರಲ್ಲೇ 17 ವರ್ಷದ ಬಾಲಕನಿಗೆ ಗುಂಡಿಕ್ಕಿದ ದುಷ್ಕರ್ಮಿಗಳು!

ನವದೆಹಲಿ: ದೇಶದ ರಾಜಧಾನಿಯಲ್ಲಿ ಪುಂಡರ ದಾಂಧಲೆ ದಿನೇದಿನೆ ಮಿತಿಮೀರುತ್ತಿದ್ದು, ಕೇವಲ ಸಣ್ಣ ವಿಷಯಕ್ಕೆ ಹೋಟೆಲ್‌ನಲ್ಲಿ ನಡೆದ ಜಗಳವೊಂದು ಶೂಟೌಟ್‌ನಲ್ಲಿ ಅಂತ್ಯವಾಗಿರುವ ಘಣ ಧೋರಣೆಯ ಘಟನೆ ಆಗ್ನೇಯ ದೆಹಲಿಯ ಅಮರ್ ಕಾಲೋನಿ ಪ್ರದೇಶದಲ್ಲಿ ನಡೆದಿದೆ. ಮೇ 26ರ ಮಂಗಳವಾರ ಸಂಜೆ ಹೋಟೆಲೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು, 17 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಮನಸೋಇಚ್ಛೆ ಗುಂಡು ಹಾರಿಸಿ ಪರಾರಿಯಾಗಿದೆ.

ದೆಹಲಿ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಅಮರ್ ಕಾಲೋನಿ ಪೊಲೀಸ್ ಠಾಣೆಗೆ ಮಂಗಳವಾರ ರಾತ್ರಿ ಸುಮಾರು 7:54ಕ್ಕೆ ಶೂಟೌಟ್ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಬೆಚ್ಚಿಬೀಳಿಸುವ ಸತ್ಯಾಂಶ ಹೊರಬಂದಿದೆ. ಗಾಯಾಳು ಬಾಲಕ ಹೋಟೆಲೊಂದರಲ್ಲಿ ಯುವತಿಯೊಬ್ಬಳ ಜೊತೆ ಕುಳಿತು ತಿಂಡಿ ತಿನ್ನುತ್ತಿದ್ದ. ಈ ವೇಳೆ ಅಲ್ಲಿ ಹಾದುಹೋದ ಹುಡುಗರ ಗುಂಪಿನಲ್ಲೊಬ್ಬ, ಬಾಲಕ ಕುಳಿತಿದ್ದ ಕುರ್ಚಿಗೆ ಅಕಸ್ಮಾತ್ತಾಗಿ ಡಿಕ್ಕಿ ಹೊಡೆದಿದ್ದಾನೆ. ಇದನ್ನು ಬಾಲಕ ಪ್ರಶ್ನಿಸಿದ್ದಕ್ಕೆ ಇಬ್ಬರ ನಡುವೆ ಜೋರು ವಾಗ್ವಾದ ನಡೆದಿದೆ.

ಜಗಳದ ನಂತರ ಆ ಹುಡುಗರ ಗುಂಪು ಅಲ್ಲಿಂದ ಹೊರಟುಹೋಗಿತ್ತು. ಆದರೆ, ಕೇವಲ 4 ರಿಂದ 5 ನಿಮಿಷಗಳಲ್ಲೇ ಮತ್ತಷ್ಟು ಆಕ್ರೋಶದೊಂದಿಗೆ ವಾಪಸ್ ಬಂದ ಆ ಗ್ಯಾಂಗ್, ಯುವತಿ ಎದುರಲ್ಲೇ ಬಾಲಕನಿಗೆ ಗುರಿಯಿಟ್ಟು ಪಿಸ್ತೂಲ್‌ನಿಂದ ಫೈರಿಂಗ್ ಮಾಡಿದೆ. ರಕ್ತದ ಮಡುವಿನಲ್ಲಿ ಬಾಲಕ ಕೆಳಗೆ ಬೀಳುತ್ತಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಸ್ಥಳೀಯ ಮೂಲಚಂದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಪರಿಸ್ಥಿತಿ ವಿಷಮಿಸಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಸದ್ಯ ಆತನನ್ನು ಏಮ್ಸ್ (AIIMS) ಟ್ರಾಮಾ ಸೆಂಟರ್‌ಗೆ ಸ್ಥಳಾಂತರಿಸಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಬಾಲಕನ ಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅದೃಷ್ಟವಶಾತ್ ಹೋಟೆಲ್‌ನಲ್ಲಿದ್ದ ಬೇರೆ ಯಾರಿಗೂ ಗಾಯಗಳಾಗಿಲ್ಲ.

ಘಟನಾ ಸ್ಥಳಕ್ಕೆ ಕ್ರೈಂ ಇನ್ವೆಸ್ಟಿಗೇಷನ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದು, ಹೋಟೆಲ್ ಹಾಗೂ ಸುತ್ತಮುತ್ತಲಿನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಜಾಲಾಡುತ್ತಿದ್ದಾರೆ. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

Edited By : Nagaraj Tulugeri
PublicNext

PublicNext

27/05/2026 01:58 pm

Cinque Terre

19.6 K

Cinque Terre

0

ಸಂಬಂಧಿತ ಸುದ್ದಿ