ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಜಿ ಸಿಎಂ ಪಿಣರಾಯಿ ವಿಜಯನ್ ಮನೆ ಮೇಲೆ ಇಡಿ ದಾಳಿ : ಸಿಪಿಎಂ ಕಾರ್ಯಕರ್ತರಿಂದ ಇಡಿ ವಾಹನ ಧ್ವಂಸ, ಪೋಲೀಸನಿಗೆ ಗಾಯ

ತಿರುವನಂತಪುರಂ: ಕೇರಳ ರಾಜಕಾರಣದಲ್ಲಿ ಇಂದು ಭಾರಿ ಸಂಚಲನ ಮೂಡಿಸಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ. ಈ ದಾಳಿಯಿಂದ ಆಕ್ರೋಶಗೊಂಡ ಸಿಪಿಎಂ ಕಾರ್ಯಕರ್ತರು ಇಡಿ ವಾಹನವನ್ನು ಧ್ವಂಸಗೊಳಿಸಿದ್ದು, ಓರ್ವ ಪೊಲೀಸರಿಗೆ ಗಾಯವಾಗಿದೆ.

ಸಿಎಂಆರ್‌ಎಲ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಪಿಣರಾಯಿ ವಿಜಯನ್ ಅವರ ನಿವಾಸ ಸೇರಿದಂತೆ ರಾಜ್ಯದ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದರು. ಈ ಕಾರ್ಯಾಚರಣೆಯು ಕೇರಳದಲ್ಲಿ ತೀವ್ರ ಹೈಡ್ರಾಮಾ ಹಾಗೂ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿದೆ.

ತಮ್ಮ ಪಕ್ಷದ ಪ್ರಮುಖ ನಾಯಕನ ಮನೆಯ ಮೇಲಿನ ಇಡಿ ದಾಳಿಯಿಂದ ತೀವ್ರ ಆಕ್ರೋಶಗೊಂಡ ಸಿಪಿಎಂ (CPI-M) ಮತ್ತು ಎಸ್‌ಎಫ್‌ಐ (SFI) ಸಂಘಟನೆಯ ನೂರಾರು ಕಾರ್ಯಕರ್ತರು ತಿರುವನಂತಪುರಂನಲ್ಲಿರುವ ಪಿಣರಾಯಿ ವಿಜಯನ್ ಅವರ ನಿವಾಸದ ಮುಂದೆ ಜಮಾಯಿಸಿದರು. ಅಧಿಕಾರಿಗಳು ದಾಳಿ ಮುಗಿಸಿ ಹೊರಬರುತ್ತಿದ್ದಂತೆ, ಸಿಪಿಎಂ ಕಾರ್ಯಕರ್ತರು ಇಡಿ ಅಧಿಕಾರಿಗಳ ವಾಹನವನ್ನು ತಡೆದು ಕಲ್ಲು ತೂರಾಟ ನಡೆಸಿದರು. ಈ ವೇಳೆ ವಾಹನ ಸಂಪೂರ್ಣವಾಗಿ ಜಖಂಗೊಂಡಿತು.

ಕೇಂದ್ರ ಭದ್ರತಾ ಸಿಬ್ಬಂದಿ ಹಾಗೂ ಪ್ರತಿಭಟನಾಕಾರರ ನಡುವೆ ಭಾರಿ ನೂಕಾಟ-ತಳ್ಳಾಟ ನಡೆದಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸುತ್ತಿದ್ದ ಸ್ಥಳೀಯ ಪೊಲೀಸ್ ಸಿಬ್ಬಂದಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ರಸ್ತೆಯಲ್ಲೇ ಅಧಿಕಾರಿಗಳ ಮೇಲೆ ಚಪ್ಪಲಿ ಮತ್ತು ನೀರಿನ ಬಾಟಲಿಗಳನ್ನು ಎಸೆದು ಆಕ್ರೋಶ ಹೊರಹಾಕಲಾಯಿತು.

ಕೊಚ್ಚಿನ್ ಮಿನರಲ್ಸ್ ಅಂಡ್ ರುಟೈಲ್ ಲಿಮಿಟೆಡ್ (CMRL) ಕಂಪನಿಯಿಂದ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಅವರ ಐಟಿ ಸಂಸ್ಥೆಗೆ ಯಾವುದೇ ಸೇವೆ ನೀಡದೆಯೇ ಅಕ್ರಮವಾಗಿ ಸುಮಾರು 1.72 ಕೋಟಿ ರೂ. ಹಣ ವರ್ಗಾವಣೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ತನಿಖೆಯನ್ನು ತೀವ್ರಗೊಳಿಸಿದೆ.

ಈ ದಾಳಿಯನ್ನು ಸಿಪಿಎಂ ನಾಯಕತ್ವ ತೀವ್ರವಾಗಿ ಖಂಡಿಸಿದೆ. ಕೇಂದ್ರದ ಬಿಜೆಪಿ ಸರ್ಕಾರವು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದ ನಾಯಕರನ್ನು ಗುರಿ ಮಾಡುತ್ತಿದೆ. ಇದು ಕೇವಲ ರಾಜಕೀಯ ದ್ವೇಷದ ಪರಮಾವಧಿ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಕಿಡಿಕಾರಿದ್ದಾರೆ. ಸದ್ಯ ತಿರುವನಂತಪುರಂ ಸೇರಿದಂತೆ ಕೇರಳದಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

Edited By : Nirmala Aralikatti
PublicNext

PublicNext

27/05/2026 04:18 pm

Cinque Terre

19.9 K

Cinque Terre

0

ಸಂಬಂಧಿತ ಸುದ್ದಿ