ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಯಾವುದೇ ಕಾರಣಕ್ಕೂ ರಾಜೀನಾಮೆ ಬೇಡ" : ಸಿದ್ದರಾಮಯ್ಯಗೆ ಆಪ್ತ ಶಾಸಕರು, ಸಚಿವರ ಸಲಹೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಬಣದ ಶಾಸಕರು ಮತ್ತು ಸಚಿವರು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ಅವರ ಮೇಲೆ ತೀವ್ರ ಒತ್ತಡ ಹೇರಿದ್ದಾರೆ.

ಸಿಎಲ್‌ಪಿ ಸಭೆಗೂ ಮುನ್ನ ರಾಜೀನಾಮೆ ನೀಡಬೇಡಿ, ಬೇಕಿದ್ದರೆ ಸ್ವಲ್ಪ ಸಮಯ ತೆಗೆದುಕೊಳ್ಳಿ, ಆದರೆ ಈಗಲೇ ರಾಜೀನಾಮೆ ನೀಡುವುದು ಬೇಡ ಎಂದು ಆಪ್ತರು ಒತ್ತಾಯಿಸುತ್ತಿದ್ದಾರೆ.

ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಸಿದ್ದರಾಮಯ್ಯ ಮೌನವಾಗಿದ್ದರು ಎಂದು ನ್ಯೂಸ್18ಗೆ ಮಾಹಿತಿ ಲಭ್ಯವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ ಎಂದು ಸಿದ್ದರಾಮಯ್ಯನವರ ಆಪ್ತ ಶಾಸಕರು ಹಾಗೂ ಸಚಿವರು ತೀವ್ರ ಒತ್ತಡ ಹೇರಿದ್ದಾರೆ.

ರಾಜೀನಾಮೆ ನೀಡದಂತೆ ಒತ್ತಾಯ

ಸಿಎಂ ಸಿದ್ದರಾಮಯ್ಯನವರ ಆಪ್ತ ಸಚಿವರು ಮತ್ತು ಶಾಸಕರು, ನಾಯಕತ್ವ ಬದಲಾವಣೆಯ ಕುರಿತು ಸಿಎಲ್‌ಪಿ ಸಭೆಯಲ್ಲೇ ಚರ್ಚೆಯಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಜನರು ಹೈಕಮಾಂಡ್ ನೋಡಿ ಮತ ಹಾಕಿಲ್ಲ, ನಿಮ್ಮ ಮುಖ ನೋಡಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ.

ನಾವೆಲ್ಲರೂ ನಿಮ್ಮಿಂದಲೇ ಗೆದ್ದು ಬಂದಿದ್ದೇವೆ. ನಮ್ಮ ಭವಿಷ್ಯದ ದೃಷ್ಟಿಯಿಂದಲೂ ನೀವು ರಾಜೀನಾಮೆ ಕೊಡಬಾರದು ಎಂದು ಆಪ್ತರು ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ.

ಪಕ್ಷದ ಭವಿಷ್ಯದ ಕುರಿತು ಆತಂಕ

ಮುಂದೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿವೆ. ನಮ್ಮ ಬೆಂಬಲಿಗರು ಗೆಲುವು ಸಾಧಿಸದಿದ್ದರೆ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುತ್ತದೆ.

ಇದರಿಂದ ನಮ್ಮ ರಾಜಕೀಯ ಭವಿಷ್ಯಕ್ಕೂ ಹಾನಿಯಾಗುತ್ತದೆ ಎಂದು ಆಪ್ತರು ಸಿದ್ದರಾಮಯ್ಯ ಅವರನ್ನು ಮನವೊಲಿಸಲು ಯತ್ನಿಸಿದ್ದಾರೆ. ಆದರೆ, ಸಚಿವರು ಮತ್ತು ಶಾಸಕರ ಈ ಮಾತುಗಳಿಗೆ ಸಿದ್ದರಾಮಯ್ಯ ಮೌನವಾಗಿಯೇ ಇದ್ದರು ಎನ್ನಲಾಗಿದೆ.

ಶಾಸಕರ ಬಲಾಬಲಕ್ಕೆ ಆಗ್ರಹ

ಸಿಎಲ್‌ಪಿ ಸಭೆಯಲ್ಲಿ ಶಾಸಕರ ಬಲಾಬಲವನ್ನು ಆಧರಿಸಿ ನಿರ್ಧಾರ ಕೈಗೊಳ್ಳಬೇಕು. ಯಾರಿಗೆ ಎಷ್ಟು ಶಾಸಕರ ಬೆಂಬಲವಿದೆ ಎಂಬುದನ್ನು ನಿರ್ಣಯಿಸಬೇಕು. ಶಾಸಕರ ಸಂಖ್ಯೆಯ ಆಧಾರದ ಮೇಲೆ ಸಿಎಂ ಸ್ಥಾನದ ಬಗ್ಗೆ ತೀರ್ಮಾನವಾಗಬೇಕು.

ಹೈಕಮಾಂಡ್ ಹೇಳಿದ ತಕ್ಷಣ ರಾಜೀನಾಮೆ ನೀಡುವುದು ಬೇಡ. ನಾವು ನಿಮ್ಮ ಜೊತೆ ಇರುತ್ತೇವೆ. ರಾಜ್ಯಕ್ಕೆ ಬರುವ ಕೇಂದ್ರ ವೀಕ್ಷಕರಿಗೂ ಇದನ್ನೇ ಹೇಳುತ್ತೇವೆ. ನಾಳೆ ರಾಜೀನಾಮೆ ಕೊಡಬೇಡಿ ಸರ್ ಎಂದು ಸಚಿವರು ಮತ್ತು ಶಾಸಕರು ಪಟ್ಟು ಹಿಡಿದಿದ್ದಾರೆ.

ಭಾವನಾತ್ಮಕ ಮನವಿ ಮತ್ತು ಸಿಎಂ ಪ್ರತಿಕ್ರಿಯೆ

ಸಿಎಂ ಭೇಟಿಯಾದ ಸಂದರ್ಭದಲ್ಲಿ ಕೆಲ ಶಾಸಕರು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಸಭೆಯಲ್ಲಿ ಯಾಕೆ ನೀವು ಒಪ್ಪಿಕೊಂಡು ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಸಹಿ ಸಂಗ್ರಹ ಮಾಡಿ ಪತ್ರ ಕಳುಹಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಆದರೆ, ಸಹಿ ಸಂಗ್ರಹಕ್ಕೆ ಸಿದ್ದರಾಮಯ್ಯ ಒಪ್ಪಿಲ್ಲ ಎನ್ನಲಾಗಿದೆ.

ಹೀಗಾಗಿ, ಕೇಂದ್ರದ ವೀಕ್ಷಕರು ಹಾಗೂ ಹೈಕಮಾಂಡ್ ನಾಯಕರು ಆಗಮಿಸಿದಾಗ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಲು ತೀರ್ಮಾನಿಸಲಾಗಿದೆ. ಹೈಕಮಾಂಡ್ ನಾಯಕರು ಬಂದಾಗ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಲು ನಿರ್ಧಾರ ಮಾಡಲಾಗಿದೆ. ತಮ್ಮ ಆಪ್ತ ಬಣದ ಸಚಿವರು, ಶಾಸಕರು ಒತ್ತಾಯ ಮಾಡಿದರೂ ಸಿದ್ದರಾಮಯ್ಯ ಮೌನವಾಗಿದ್ದರು.

ಎಲ್ಲಾ ಮಾತು, ಸಲಹೆ, ಚರ್ಚೆಗಳನ್ನು ಆಲಿಸಿದ ಸಿಎಂ ಸಿದ್ದರಾಮಯ್ಯ ಇದಕ್ಕೆ ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ಸುಮ್ಮನೆ ಇದ್ದರು. ಬಳಿಕ, ಈ ಬಗ್ಗೆ ನಾಳೆ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Edited By : Abhishek Kamoji
PublicNext

PublicNext

27/05/2026 07:18 pm

Cinque Terre

8.44 K

Cinque Terre

0

ಸಂಬಂಧಿತ ಸುದ್ದಿ