ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಾಳಾಗ್ತಿದೆ ಕಾನೂನು, ಸುವ್ಯವಸ್ಥೆ - ರಕ್ಷಕರೇ ಭಕ್ಷಕರಾದ್ರಾ?

ಧಾರವಾಡ: ಹುಬ್ಬಳ್ಳಿ, ಧಾರವಾಡಕ್ಕೆ ಅದರಲ್ಲೂ ವಿದ್ಯಾಕಾಶಿ ಎಂಬ ಹೆಸರು ಹೊತ್ತಿರುವ ಧಾರವಾಡಕ್ಕೆ ತನ್ನದೇ ಆದ ಹಿರಿಮೆ ಇದೆ. ಇಲ್ಲಿನ ಕವಿ, ಸಾಹಿತಿಗಳು, ಶೈಕ್ಷಣಿಕ ಸಂಸ್ಥೆಗಳಿಂದ ಧಾರವಾಡ ರಾಜ್ಯದಲ್ಲೇ ಸುಸಂಸ್ಕೃತರ ನಗರ ಎಂಬ ಹೆಸರು ಹೊತ್ತಿದೆ. ಆದರೆ, ಕಳೆದ ಎರಡ್ಮೂರು ವರ್ಷಗಳಿಂದ ಧಾರವಾಡದಲ್ಲಿ ನಡೆಯುತ್ತಿರುವ ಕೊಲೆ, ಸುಲಿಗೆ, ಅತ್ಯಾಚಾರ, ಅನ್ಯಾಯ, ದರೋಡೆ, ದೌರ್ಜನ್ಯ, ದಬ್ಬಾಳಿಕೆಯಿಂದ ಧಾರವಾಡದ ಹಿರಿಮೆಗೆ ಕಪ್ಪು ಚುಕ್ಕೆ ಬಿದ್ದಂತಾಗಿದೆ.

ಹೌದು! ಧಾರವಾಡಕ್ಕೆ ಹೋಲಿಸಿದರೆ ಹುಬ್ಬಳ್ಳಿ ನಗರದಲ್ಲಿ ಹೆಚ್ಚು ಕ್ರೈಂಗಳು ನಡೆಯುತ್ತಿದ್ದವು. ಆದರೆ, ಈಗ ಧಾರವಾಡ ಕ್ರೈಂಗಳ ಪಟ್ಟಿಯಲ್ಲಿ ನಿಧಾನವಾಗಿ ಮೊದಲ ಸ್ಥಾನ ಪಡೆದುಕೊಳ್ಳುವತ್ತ ದಾಪುಗಾಲಿಡುತ್ತಿದೆ. ಇದು ಭಾರೀ ಕಳವಳಕಾರಿ ಸಂಗತಿ. ಹಗಲಲ್ಲೇ ಫೈರಿಂಗ್ ಮಾಡುವುದು, ಮನೆಗೆ ಹೊಕ್ಕು ವ್ಯಕ್ತಿಯನ್ನು ಕೊಲ್ಲುವುದು, ಮಾರಕಾಸ್ತ್ರಗಳಿಂದ ಜನರ ಮೇಲೆ ಹಲ್ಲೆ ನಡೆಸುವುದು, ಯಾರದ್ದೋ ಆಸ್ತಿಯನ್ನು ಇನ್ನ್ಯಾರೋ ಖೊಟ್ಟಿ ದಾಖಲೆ ಸೃಷ್ಟಿಸಿ ಹೊಡೆಯುವುದು, ಅದನ್ನು ಕೇಳಲು ಬಂದವರ ಮೇಲೆ ಧಮ್ಕಿ ಮಾಡುವುದು ಇವೆಲ್ಲ ಇದೀಗ ಧಾರವಾಡ ನಗರದಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಅದೆಷ್ಟೋ ಜನ ಅಮಾಯಕರನ್ನು ಹೆದರಿಸಿ, ಬೆದರಿಸಿದವರನ್ನು ಜೈಲಿಗಟ್ಟಬೇಕಾದ ರಕ್ಷಕರೇ ಈಗ ಭಕ್ಷಕರಾಗಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

ಕೊಲೆ, ಸುಲಿಗೆ, ಅನ್ಯಾಯ, ದಬ್ಬಾಳಿಕೆ ಮಾಡಿದವರ ಬೆನ್ನಿಗೆ ನಿಲ್ಲುವ ಪೊಲೀಸರು ಅವರಿಗೆ ನಿರೀಕ್ಷಣಾ ಜಾಮೀನು ಹಾಕಿಕೊಳ್ಳಲು ಹೇಳಿ ಅವರಿಂದ ಅದೇನೋ ಪಡೆದು ಹೊರಗಡೆ ಬಿಡುತ್ತಾರೆ ಎಂಬ ಆರೋಪವೂ ಇದೀಗ ಅವಳಿನಗರದಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ. ಇಂತಹ ಅದೆಷ್ಟೋ ಕ್ರೈಂಗಳಲ್ಲಿ ಪೊಲೀಸರು ಭಾಗಿಯಾಗಿದ್ದಾರೆ. ಈ ರೀತಿಯ ಆರೋಪವನ್ನು ಸ್ವತಃ ಕೇಂದ್ರ ಸಚಿವರೇ ಮಾಡಿ, ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ನೋಡಿದ್ರಲ್ಲಾ.. ಹುಬ್ಬಳ್ಳಿ, ಧಾರವಾಡದ ಸದ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಸ್ವತಃ ಜನಪ್ರತಿನಿಧಿಗಳೇ ಬೇಸರ ವ್ಯಕ್ತಪಡಿಸುವಂತಾಗಿದೆ. ಜನ ಅಂತೂ ಹಾದಿ-ಬೀದಿಯಲ್ಲಿ ಇದರ ಬಗ್ಗೆ ಮಾತನಾಡುವಂತಾಗಿದೆ. ಇನ್ನು ಅವಳಿನಗರದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಕೇಂದ್ರ ಸಚಿವರು ಏನು ಹೇಳಿದ್ದಾರೆ ಕೇಳೋಣ ಬನ್ನಿ.

ಅವಳಿನಗರದಲ್ಲಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ವಿರೋಧ ಪಕ್ಷದವರು ಮಾತನಾಡುವುದು ಸಾಮಾನ್ಯ. ಆದರೆ, ಆಡಳಿತ ಪಕ್ಷದ ಶಾಸಕರೇ ಅದರ ಬಗ್ಗೆ ಮಾತನಾಡುತ್ತಾರೆ ಎಂದರೆ ಅದೆಷ್ಟರಮಟ್ಟಿಗೆ ಅವಳಿನಗರದಲ್ಲಿ ಲಾ ಆ್ಯಂಡ್ ಆರ್ಡರ್ ಹದಗೆಟ್ಟಿರಬಹುದು ವಿಚಾರ ಮಾಡಿ. ಪೊಲೀಸ್ ಆಯುಕ್ತರ ಕಚೇರಿ ಡೀಲರ್‌ಗಳ ಅಡ್ಡೆಯಾಗಿದೆ ಎಂದಿದ್ದ ಶಾಸಕ ಅರವಿಂದ ಬೆಲ್ಲದ ಕೂಡ ಕಾನೂನು ಸುವ್ಯವಸ್ಥೆ ಹಾಳಾಗಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಬಂದ ಮೇಲೆ ಆರೋಪಿಗಳ ಮೊಣಕಾಲಿಗೆ ಗುಂಡು ಹೊಡೆಯುವ ಪ್ರಕ್ರಿಯೆ ಜಾರಿಗೆ ತಂದಿದ್ದರು. ಅದು ಕೆಲವರಲ್ಲಿ ನಡುಕು ಹುಟ್ಟಿಸಿದ್ದಂತೂ ಸುಳ್ಳಲ್ಲ. ಆದರೆ, ಅದು ಅರ್ಧಕ್ಕೆ ನಿಂತಿದ್ದರಿಂದ ಇದೀಗ ಆರೋಪಿಗಳು ಪೊಲೀಸರ ಕೈಗೂ ಸಿಗದಂತಾಗಿದೆ. ಏನೇ ಆಗಲಿ ವಿದ್ಯಾಕಾಶಿ ಎಂಬ ಹಣೆಪಟ್ಟಿ ಹೊತ್ತಿರುವ ಧಾರವಾಡದಲ್ಲಿ ಕಾನೂನು, ಸುವ್ಯವಸ್ಥೆ ತೀರಾ ಹದಗೆಟ್ಟು ಹೋಗುವ ಮುನ್ನ ಶಾಂತಿ ನೆಲೆಸಿದರೆ ಅಷ್ಟೇ ಸಾಕಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/06/2026 05:05 pm

Cinque Terre

71.65 K

Cinque Terre

0

ಸಂಬಂಧಿತ ಸುದ್ದಿ