ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿಯ ಹೋಟೆಲ್‌ನಲ್ಲಿ ಭೀಕರ ಅಗ್ನಿ ದುರಂತ - 21 ಮಂದಿ ಸಜೀವ ದಹನ, ಹಲವು ವಿದೇಶಿಯರ ಸಾವು!

ನವದೆಹಲಿ: ದೆಹಲಿಯ ಮಾಳವೀಯ ನಗರದ ಹೋಟೆಲ್‌ವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 21 ಜನರು ಜೀವಂತವಾಗಿ ದಹನವಾಗಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ 40ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಹೊರತಂದಿದ್ದಾರೆ. ಮೃತರ ಪೈಕಿ ಬಹುತೇಕರು ವಿದೇಶಿ ಪ್ರಜೆಗಳು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಹೋಟೆಲ್‌ನಲ್ಲಿ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ಮ್ಯಾಕ್ಸ್ ಹೆಲ್ತ್‌ಕೇರ್ ನೀಡಿರುವ ಮಾಹಿತಿ ಪ್ರಕಾರ, ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಗೆ ಒಟ್ಟು 39 ಜನರನ್ನು ತರಲಾಗಿತ್ತು. ಈ ಪೈಕಿ 18 ಜನರು ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದರು. ಸದ್ಯ 15 ರೋಗಿಗಳನ್ನು ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿದ್ದು, ಇವರಲ್ಲಿ ಎಂಟು ಮಂದಿಯ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ವೆಂಟಿಲೇಟರ್ ಸಂಪರ್ಕ ಕಲ್ಪಿಸಲಾಗಿದೆ.

ಮತ್ತೊಂದೆಡೆ, ದೆಹಲಿಯ ಏಮ್ಸ್ (AIIMS) ಆಸ್ಪತ್ರೆಗೆ 13 ಗಾಯಾಳುಗಳನ್ನು ದಾಖಲಿಸಲಾಗಿದೆ. ಇವರಲ್ಲಿ ಮೂವರು ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಹೋಟೆಲ್‌ನ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ದಾರುಣ ಘಟನೆಗೆ ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು 'X' ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, "ರಾಜಧಾನಿಯಲ್ಲಿ ಸರಣಿ ಅಗ್ನಿ ಅವಘಡಗಳು ಸಂಭವಿಸುತ್ತಿರುವುದು ಮತ್ತು ಮುಗ್ಧ ಜೀವಗಳು ಬಲಿಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಪ್ರಾರ್ಥಿಸಿದ್ದಾರೆ.

"ಹೋಟೆಲ್ ಮಾಲೀಕರ ನಿರ್ಲಕ್ಷ್ಯ ಸಾಬೀತಾದರೆ ತಕ್ಷಣವೇ ಬಂಧಿಸಲಾಗುವುದು. ಈ ಹೋಟೆಲ್‌ಗೆ ಅಗತ್ಯವಿರುವ ನಿರಾಕ್ಷೇಪಣಾ ಪತ್ರ (NoC) ಮತ್ತು ವಸತಿ ವ್ಯವಸ್ಥೆ ಕಲ್ಪಿಸುವ ಪರವಾನಗಿ ಇತ್ತೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ" ಎಂದು ಗುಡುಗಿದ್ದಾರೆ.

Edited By : Nagaraj Tulugeri
PublicNext

PublicNext

03/06/2026 03:41 pm

Cinque Terre

5.43 K

Cinque Terre

0

ಸಂಬಂಧಿತ ಸುದ್ದಿ