ಲಕ್ನೋ: ಶಾಹಿದ್ ಕಪೂರ್ ನಟನೆಯ ಸೂಪರ್ ಹಿಟ್ ವೆಬ್ ಸರಣಿ 'ಫರ್ಜಿ' (Farzi) ಸಿನೆಮಾವನ್ನೂ ಮೀರಿಸುವಂತಹ ಹೈ-ವೋಲ್ಟೇಜ್ ಡ್ರಾಮಾವೊಂದು ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಡ್ರಗ್ಸ್ ಕಳ್ಳಸಾಗಣೆದಾರರು 100 ರೂಪಾಯಿ ಮುಖಬೆಲೆಯ ನೋಟುಗಳ ಮಳೆಗರೆದಿದ್ದಾರೆ! ಆದರೆ, ಕಳ್ಳರ ಈ 'ಖತರ್ನಾಕ್' ಪ್ಲಾನ್ ವರ್ಕ್ ಆಗಿಲ್ಲ.
ಸೋನಭದ್ರ ಜಿಲ್ಲೆಯ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಹೊಂಡಾ ಸಿಟಿ ಕಾರಿಗೆ ಪೊಲೀಸರು ನಿಲ್ಲುವಂತೆ ಸೂಚಿಸಿದ್ದಾರೆ. ಆದರೆ, ಪೊಲೀಸರನ್ನು ಕಂಡು ಹೆದರಿದ ಡ್ರಗ್ಸ್ ಪೆಡ್ಲರ್‌ಗಳು ಕಾರನ್ನು ನಿಲ್ಲಿಸದೇ ಜೂಟ್ ತಿಂದಿದ್ದಾರೆ. ತಕ್ಷಣವೇ ಅಲರ್ಟ್ ಆದ ವಿಶೇಷ ಕಾರ್ಯಾಚರಣೆ ತಂಡ (SOG), ಸಿನಿಮೀಯ ಶೈಲಿಯಲ್ಲಿ ಕಾರನ್ನು ಬೆನ್ನಟ್ಟಿದೆ.
ಖದೀಮರು ತಮ್ಮ ಕಾರಿನಿಂದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು, ಅದನ್ನು ಜಖಂಗೊಳಿಸಿದ್ದಾರೆ. ಪೊಲೀಸರು ಅಸಹಾಯಕರಾಗಿ ನಿಲ್ಲುವ ಸಮಯಕ್ಕೆ, ಅಲ್ಲೇ ಇದ್ದ ಪ್ರದೀಪ್ ಕುಮಾರ್ ಎಂಬ ಸ್ಥಳೀಯ ನಿವಾಸಿ ತಕ್ಷಣವೇ ತನ್ನ ವಾಹನವನ್ನು ಪೊಲೀಸರಿಗೆ ನೀಡಿ ಸಹಾಯ ಮಾಡಿದ್ದಾರೆ. ಪೊಲೀಸರು ಮತ್ತೆ ಚೇಸಿಂಗ್ ಮುಂದುವರಿಸಿದ್ದಾರೆ.
ವೇಗವಾಗಿ ಓಡಿದರೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರಿತ ಸ್ಮಗ್ಲರ್‌ಗಳು ಹೊಸ ಐಡಿಯಾ ಮಾಡಿದ್ದಾರೆ. ಪೊಲೀಸರ ಗಮನ ಬೇರೆಡೆ ಸೆಳೆಯಲು ಹಾಗೂ ರಸ್ತೆಯಲ್ಲಿ ಹೋಗುವ ಜನರೆಲ್ಲಾ ದುಡ್ಡು ಆಯಲು ಮುಗಿಬಿದ್ದರೆ ಟ್ರಾಫಿಕ್ ಜಾಮ್ ಆಗುತ್ತದೆ ಎಂಬ ಪ್ಲಾನ್‌ನೊಂದಿಗೆ ಕಾರಿನ ಕಿಟಕಿಯಿಂದ ₹100 ಮುಖಬೆಲೆಯ ನೋಟುಗಳನ್ನು ರಸ್ತೆಗೆ ತೂರಲಾರಂಭಿಸಿದ್ದಾರೆ. ಆದರೆ, ಪೊಲೀಸರು ಮಾತ್ರ ಹಣದ ಆಸೆಗೆ ಬೀಳದೆ ಕಳ್ಳರ ಕಾರನ್ನೇ ಟಾರ್ಗೆಟ್ ಮಾಡಿ ಬೆನ್ನಟ್ಟಿದ್ದಾರೆ.
ಕೊನೆಗೂ ಪೊಲೀಸರು ಕಾರನ್ನು ಸುತ್ತುವರೆದಾಗ, ಆರೋಪಿಗಳು ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಪಂಜಾಬ್‌ನ ಲುಧಿಯಾನ ಮೂಲದ ಪ್ರಿನ್ಸ್ (27) ಎಂಬಾತನ ಕಾಲಿಗೆ ಗುಂಡು ತಗುಲಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿ ಕತ್ತಲಲ್ಲಿ ಪರಾರಿಯಾಗಿದ್ದಾನೆ.
ಏನೇನು ಜಪ್ತಿಯಾಗಿದೆ?
*ಡ್ರಗ್ಸ್: ₹49 ಲಕ್ಷ ಮೌಲ್ಯದ 3 ಕೆಜಿ ಅಫೀಮು ಹಾಗೂ 225 ಕೆಜಿ ಗಸಗಸೆ ಸಿಪ್ಪೆ (Poppy Husk).
*ಇತರ ವಸ್ತುಗಳು: ಹೊಂಡಾ ಸಿಟಿ ಕಾರ್, ₹50,000 ನಗದು, ಒಂದು ಪಿಸ್ತೂಲ್ ಹಾಗೂ ಗುಂಡುಗಳು.
*ಒಟ್ಟು ಜಪ್ತಿ ಮೌಲ್ಯ: ಸುಮಾರು ₹58.75 ಲಕ್ಷ.
ಬಂಧಿತ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಇವರು ಜಾರ್ಖಂಡ್‌ನಿಂದ ಪಂಜಾಬ್‌ಗೆ ಡ್ರಗ್ಸ್ ಸಪ್ಲೈ ಮಾಡುವ ದೊಡ್ಡ ನೆಟ್‌ವರ್ಕ್ ಹೊಂದಿದ್ದು, ಈ ಹಿಂದೆಯೂ ಹಲವು ಬಾರಿ ಹೀಗೆಯೇ ಸ್ಮಗ್ಲಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯಕ್ಕೆ ಪರಾರಿಯಾಗಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಗ್ರಾಮದ ರಸ್ತೆಯಲ್ಲಿ ದುಡ್ಡಿನ ಮಳೆ ಸುರಿದಿದ್ದನ್ನು ಕಂಡು ಸ್ಥಳೀಯರು ಕಣ್ಣರಳಿಸಿದ್ದರೆ, ಸ್ಮಗ್ಲರ್‌ಗಳಿಗೆ ಮಾತ್ರ ತಮ್ಮ ಈ 'ಕ್ಯಾಶ್ ಪ್ಲಾನ್' ವರ್ಕೌಟ್ ಆಗದ್ದಕ್ಕೆ ಜೈಲು ಪಾಲಾಗುವಂತಾಗಿದೆ.
PublicNext
03/06/2026 07:21 pm