ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಭದ್ರತಾ ಸಂಸ್ಥೆಗಳು ಮತ್ತು ಸ್ಥಳೀಯ ಪೊಲೀಸರು ನಡೆಸಿದ ಬೃಹತ್ ಜಂಟಿ ಕಾರ್ಯಾಚರಣೆಯಲ್ಲಿ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸಿಸುತ್ತಿದ್ದ 166 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.
ನಗರದ ವಿವಿಧ ಪ್ರದೇಶಗಳಲ್ಲಿ ನಕಲಿ ದಾಖಲೆಗಳನ್ನು ಬಳಸಿ ವಿದೇಶಿಗರು ನೆಲೆಸಿದ್ದಾರೆ ಎಂಬ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದರು. ನಿರ್ಮಾಣ ಕಾಮಗಾರಿ ಪ್ರದೇಶಗಳು, ಕೈಗಾರಿಕಾ ವಲಯಗಳು ಹಾಗೂ ಬಾಡಿಗೆ ಮನೆಗಳಲ್ಲಿ ತಪಾಸಣೆ ನಡೆಸಿದ ವೇಳೆ ಈ ಅಕ್ರಮ ಜಾಲ ಪತ್ತೆಯಾಗಿದೆ.
ಬಂಧಿತರಿಂದ ವಶಪಡಿಸಿಕೊಂಡ ಪಾಸ್‌ಪೋರ್ಟ್, ವೀಸಾ ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿದಾಗ, ಹಲವಾರು ದಾಖಲೆಗಳು ನಕಲಿ ಅಥವಾ ಅಮಾನ್ಯವಾಗಿರುವುದು ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಗಡಿ ದಾಟಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಲು ದಲ್ಲಾಳಿಗಳ ನೆರವು ಪಡೆದಿರುವ ಶಂಕೆ ವ್ಯಕ್ತವಾಗಿದೆ.
ಇದಲ್ಲದೆ, ನಕಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಪ್ಯಾನ್ ಕಾರ್ಡ್‌ಗಳನ್ನು ಬಳಸಿ ಸ್ಥಳೀಯವಾಗಿ ಮನೆ ಬಾಡಿಗೆ ಪಡೆದು ವಾಸಿಸುತ್ತಿದ್ದ ಮಾಹಿತಿ ಪತ್ತೆಯಾಗಿದೆ.
ಬಂಧಿತ 166 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇವರಿಗೆ ನೆರವಾದ ದಲ್ಲಾಳಿಗಳು ಹಾಗೂ ನಕಲಿ ದಾಖಲೆ ಜಾಲದ ಪತ್ತೆಗೆ ತನಿಖೆ ತೀವ್ರಗೊಳಿಸಲಾಗಿದೆ. ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಿದೇಶಾಂಗ ಸಚಿವಾಲಯದ ನಿಯಮಾನುಸಾರ ಗಡಿಪಾರು ಮಾಡುವ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
PublicNext
03/06/2026 04:32 pm
LOADING...