ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡು: ದೇವಿರಮ್ಮನಹಳ್ಳಿ ಶಾಲೆಯಲ್ಲಿ ಆತಂಕ - ಪುಟಾಣಿಗಳ ಪ್ರಾಣಕ್ಕೆ ಕಂಟಕವಾದ ಒಣಗಿದ ಮರ!

ನಂಜನಗೂಡು: ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಕಾಲವಿದು. ಇದಕ್ಕೆ ಸ್ಪಷ್ಟ ಉದಾಹರಣೆಯಂತೆ ನಂಜನಗೂಡಿನ ದೇವಿರಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಹೊರತಾಗಿಲ್ಲ.

ದೇವಿರಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಕೂಗಳತೆ ದೂರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ಕೂಸಿನ ಮನೆ ಕಟ್ಟಡಗಳ ಮಧ್ಯಭಾಗದಲ್ಲಿರುವ ಎರಡು ಅರಳಿ ಮರಗಳ ರೆಂಬೆಕೊಂಬೆಗಳು ಒಣಗಿ ಬೀಳುತ್ತಿವೆ.

ಶಾಲೆಗೆ ಬರುವ ಮಕ್ಕಳು, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬರುತ್ತಿದ್ದಾರೆ. ಅಲ್ಲದೆ ಗ್ರಾಮಸ್ಥರು ಇದೇ ರಸ್ತೆಯಲ್ಲಿ ಓಡಾಡುತ್ತಿರುವುದರಿಂದ ತುಂಬಾ ತೊಂದರೆಯಾಗಿದೆ.

ಮಳೆಗಾಲದ ಸಂದರ್ಭವಾಗಿರುವುದರಿಂದ ಬಿರುಗಾಳಿ ಮಳೆಗೆ ಯಾವಾಗ ಬೇಕಾದರೂ ಮರಗಳ ರೆಂಬೆಕೊಂಬೆಗಳು ಮುರಿದುಬೀಳುವ ಆತಂಕ ಎದುರಾಗಿದೆ. ಅಪಾಯಕ್ಕೆ ಆಹ್ವಾನಿಸುತ್ತಿರುವ ರೆಂಬೆಕೊಂಬೆಗಳನ್ನು ತೆರವು ಮಾಡುವಂತೆ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಗ್ರಾಮಸ್ಥರು ಎರಡು ವರ್ಷಗಳಿಂದಲೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು, ಅಧಿಕಾರಿಗಳು ಮಾತ್ರ ಕ್ಯಾರೇ ಎಂದಿಲ್ಲ.

ಕಂಡರೂ ಕಾಣದಂತಿರುವ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಗ್ರಾಮಸ್ಥರ ಮೇಲೆ ರೆಂಬೆಕೊಂಬೆಗಳು ಬಿದ್ದು ಗಾಯಗೊಂಡಿರುವುದು ಸಾಕಷ್ಟು ಉದಾಹರಣೆಗಳಿವೆ.

ಮಕ್ಕಳ ಮೇಲೆ ಬೀಳುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಎರಡು ಅರಳಿ ಮರಗಳ ರೆಂಬೆಕೊಂಬೆಗಳನ್ನು ತೆರವು ಮಾಡಬೇಕು. ಇಲ್ಲವಾದಲ್ಲಿ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳೊಂದಿಗೆ ಜೊತೆಗೂಡಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Edited By : Manjunath H D
PublicNext

PublicNext

04/06/2026 06:25 pm

Cinque Terre

12.73 K

Cinque Terre

0

ಸಂಬಂಧಿತ ಸುದ್ದಿ