ಮೈಸೂರು: ನಂಜನಗೂಡು ತಾಲ್ಲೂಕಿನ ಗಟ್ಟವಾಡಿಪುರ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಗ್ರಾಮಸ್ಥರು ಕುಡಿಯುವ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಮನೆಮನೆಗೆ ನಲ್ಲಿ ಮೂಲಕ ಶುದ್ಧ ನೀರು ಪೂರೈಸಬೇಕಿದ್ದ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆ ಸಂಪೂರ್ಣ ವಿಫಲವಾಗಿರುವುದು ಇದಕ್ಕೆ ಕಾರಣವಾಗಿದೆ.
ಗ್ರಾಮದಲ್ಲಿ 1500 ಸಾವಿರ ಜನ ಸಂಖ್ಯೆ ಇದೆ. ಜಲ ಜೀವನ್ ಮಿಷನ್ ಯೋಜನೆಯ ಪೈಪ್ ಲೈನ್ ಕಾಮಗಾರಿ ಮುಗಿದಿದ್ದರೂ ಮನೆ ಮನೆಗೆ ಗಂಗೆ ಬಂದಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು, ಅದರಲ್ಲೂ ಮಹಿಳೆಯರು ದಿನನಿತ್ಯ ಅರ್ಧ ಕಿಲೋಮೀಟರ್ ದೂರದ ಹೊಲಗದ್ದೆಗಳಲ್ಲಿರುವ ರೈತರ ಪಂಪ್ಸೆಟ್‌ಗಳಿಗೆ ಹೋಗಿ ನೀರು ತರುತ್ತಿದ್ದಾರೆ. ಬಿಂದಿಗೆ ಹಿಡಿದು ನೀರಿಗಾಗಿ ಪರದಾಡುತ್ತಿದ್ದು, ಗ್ರಾಮಸ್ಥರು ಸೈಕಲ್ ಮತ್ತು ಬೈಕ್ ಗಳಲ್ಲಿ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಡಿಯುವ ನೀರು ಕಲ್ಪಿಸುವ ಜವಾಬ್ದಾರಿ ಹೊಂದಿರುವ ದೊಡ್ಡ ಕವಲಂದೆ ಗ್ರಾಮ ಪಂಚಾಯಿತಿ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಪೈಪ್‌ಲೈನ್ ಹಾಕಿ, ನಲ್ಲಿ ಅಳವಡಿಸಿ ಎರಡೂ ವರ್ಷವಾಯ್ತು. ಆದರೆ ಇಲ್ಲಿಯವರೆಗೆ ಸರಿಯಾಗಿ ನೀರು ಬಂದಿಲ್ಲ. ದೂರು ನೀಡಿದರೂ ಪಂಚಾಯಿತಿ ಅಧಿಕಾರಿಗಳು ಗ್ರಾಮದ ಕಡೆ ತಿರುಗಿ ನೋಡುತ್ತಿಲ್ಲ. ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಹೇಳಿದರೆ, ನೀರಾವರಿ ಇಲಾಖೆ ಅಧಿಕಾರಿಗಳನ್ನು ಕೇಳಿ ಎಂದು ಉಡಾಫೆ ಉತ್ತರ ನೀಡುತ್ತಾರೆ. ಚುನಾವಣೆ ಬಂದಾಗ ಮಾತ್ರ ವೋಟು ಕೇಳಲು ಬರುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಕ್ಷಣ ಸಮಸ್ಯೆ ಬಗೆಹರಿಸದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಿಎಂ ಸುಗಂಧರಾಜು ಪಬ್ಲಿಕ್ ನೆಕ್ಸ್ಟ್ ಮೈಸೂರು.
PublicNext
14/06/2026 05:26 pm