ನಂಜನಗೂಡು: ಸಂಪೂರ್ಣ ಹೂಳು ತುಂಬಿಕೊಂಡು, ಕಲುಷಿತ ನೀರಿನಿಂದ ಗಬ್ಬೆದ್ದು ನಾರುತ್ತಿದ್ದ ನಂಜನಗೂಡು ತಾಲ್ಲೂಕಿನ ದೇವಿರಮ್ಮನಹಳ್ಳಿ ಕೆರೆಗೆ ಕೊನೆಗೂ ಮರುಜೀವ ಸಿಕ್ಕಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ನಮ್ಮೂರು ನಮ್ಮ ಕೆರೆ' ಕಾರ್ಯಕ್ರಮದಡಿ ಈ ಕೆರೆಯನ್ನು ಅತ್ಯಂತ ಯಶಸ್ವಿಯಾಗಿ ಪುನಶ್ಚೇತನಗೊಳಿಸಲಾಗಿದ್ದು, ಸ್ಥಳೀಯ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.
ಸುಮಾರು ₹12 ಲಕ್ಷ ವೆಚ್ಚದಲ್ಲಿ ಈ ಕೆರೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಲಾಗಿದೆ. ಯೋಜನೆಯಡಿ ಕೆರೆಯ ಹೂಳೆತ್ತುವುದು, ಸುಭದ್ರವಾದ ಬದು ನಿರ್ಮಾಣ, ಕೋಡಿ ದುರಸ್ತಿ ಹಾಗೂ ಗರಿಷ್ಠ ಪ್ರಮಾಣದಲ್ಲಿ ನೀರು ಶೇಖರಣೆಯಾಗುವಂತೆ ಕಾಮಗಾರಿ ನಡೆಸಲಾಗಿದೆ. ಈ ಮಹತ್ಕಾರ್ಯಕ್ಕೆ ದೇವಿರಮ್ಮನಹಳ್ಳಿ ಹಾಗೂ ದೇವಿರಮ್ಮನಹಳ್ಳಿ ಹುಂಡಿ ಗ್ರಾಮಸ್ಥರು ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಸಂಪೂರ್ಣ ಸಹಕಾರ ನೀಡಿವೆ.
ಅಂತರ್ಜಲ ವೃದ್ಧಿ, ಕೃಷಿಗೆ ಆಸರೆ
ಮಳೆ ನೀರು ಹಾಗೂ ಕಾಲುವೆ ನೀರು ಸುಲಭವಾಗಿ ಕೆರೆಗೆ ಹರಿದು ಬರುವಂತೆ ಚಾನೆಲ್‌ಗಳನ್ನು ಸಿದ್ಧಪಡಿಸಲಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಲಿದ್ದು, ಸುತ್ತಮುತ್ತಲಿನ ರೈತರ ಕೃಷಿ ಚಟುವಟಿಕೆಗಳಿಗೆ ಭಾರಿ ಅನುಕೂಲವಾಗಲಿದೆ.
ಸದ್ಯ ಕೆರೆಯ ಸುತ್ತಲೂ ಬದು ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಕೆರೆಗೆ ಕಲ್ಲು ಅಳವಡಿಸುವುದು (ಪಿಚ್ಚಿಂಗ್), ಸೋಪಾನಕಟ್ಟೆ ಹಾಗೂ ವಾಕಿಂಗ್ ಪಾತ್ (ನಡಿಗೆ ದಾರಿ) ನಿರ್ಮಾಣ ಮತ್ತು ಸಾರ್ವಜನಿಕರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಕಲ್ಪಿಸಲು ಗ್ರಾಪಂ ಆಡಳಿತ ಚಿಂತನೆ ನಡೆಸಿದೆ.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ನಂಜನಗೂಡು ತಾಲ್ಲೂಕಿನಲ್ಲಿ ಪುನಶ್ಚೇತನಗೊಂಡ 3ನೇ ಕೆರೆ ಇದಾಗಿದೆ. ಧರ್ಮಸ್ಥಳ ಸಂಸ್ಥೆಯು ರಾಜ್ಯಾದ್ಯಂತ ಈಗಾಗಲೇ ಒಟ್ಟು 1090 ಕೆರೆಗಳನ್ನು ಯಶಸ್ವಿಯಾಗಿ ಅಭಿವೃದ್ಧಿ ಪಡಿಸಿ ಜಲಕ್ರಾಂತಿ ಮಾಡಿರುವುದು ಗಮನಾರ್ಹ.
ವರದಿ: ಸಿ.ಎಂ. ಸುಗಂಧರಾಜು, ಪಬ್ಲಿಕ್ ನೆಕ್ಸ್ಟ್, ಮೈಸೂರು
PublicNext
06/06/2026 09:43 pm