ಶಿವಮೊಗ್ಗ : ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಗವಟೂರು ಗ್ರಾಮದಲ್ಲಿ ನಡೆಯುತ್ತಿದ್ದ ಕೆರೆ ಅಭಿವೃದ್ಧಿ ಕಾಮಗಾರಿಯ ವೇಳೆ ಪುರಾತನ ಜೈನ ತೀರ್ಥಂಕರರ ಮೂರ್ತಿಗಳು ಹಾಗೂ ಪೀಠದ ಅವಶೇಷಗಳು ಪತ್ತೆಯಾಗಿವೆ. ಈ ಆಕಸ್ಮಿಕ ಶೋಧನೆಯಿಂದಾಗಿ ಈ ಭಾಗದಲ್ಲಿ ಹಿಂದೊಮ್ಮೆ ಭವ್ಯವಾದ ಜೈನ ಬಸದಿ ಅಸ್ತಿತ್ವದಲ್ಲಿತ್ತು ಎಂಬ ಬಲವಾದ ಸುಳಿವು ದೊರೆತಿದೆ.
ಗವಟೂರು ಗ್ರಾಮದ ತಾವರೆಕೆರೆ ಪ್ರದೇಶದಲ್ಲಿ ಹಿಟಾಚಿ ಯಂತ್ರದ ಮೂಲಕ ಮಣ್ಣು ತೆರವುಗೊಳಿಸುವ ಕೆಲಸ ನಡೆಯುತ್ತಿತ್ತು. ಈ ವೇಳೆ ಮಣ್ಣಿನಡಿ ಹುದುಗಿದ್ದ ಬೃಹತ್ ಕಲ್ಲಿನ ರಚನೆಗಳು ಗೋಚರಿಸಿವೆ. ಕಾರ್ಮಿಕರು ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅದೊಂದು ಅದ್ಭುತ ಕೆತ್ತನೆಗಳಿರುವ ಐತಿಹಾಸಿಕ ಶಿಲಾಮೂರ್ತಿ ಎಂಬುದು ಅರಿವಿಗೆ ಬಂದಿದೆ. ತಕ್ಷಣವೇ ಎಚ್ಚೆತ್ತ ಅವರು ಕಾಮಗಾರಿಯನ್ನು ನಿಲ್ಲಿಸಿ, ಸ್ಥಳೀಯ ಆಡಳಿತ ಹಾಗೂ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದರು.
ಪುರಾತತ್ವ ತಜ್ಞರ ಪ್ರಾಥಮಿಕ ಅಂದಾಜಿನ ಪ್ರಕಾರ, ಈ ಅಪರೂಪದ ಮೂರ್ತಿಗಳು 12 ರಿಂದ 13ನೇ ಶತಮಾನದ ಜೈನ ಪರಂಪರೆಗೆ ಸೇರಿವೆ.
ತೀರ್ಥಂಕರರು ಪದ್ಮಾಸನ ಹಾಕಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿರುವಂತೆ ಮೂರ್ತಿಯನ್ನು ಕೆತ್ತಲಾಗಿದೆ.
ಮೂರ್ತಿಯ ತಲೆಯ ಹಿಂಭಾಗದಲ್ಲಿ ಸುಂದರವಾದ 'ಪ್ರಭಾವಳಿ' ಹಾಗೂ ಒರಗು ಪೀಠದ ಸುತ್ತಲೂ ಹೂವಿನ ಆಕರ್ಷಕ ಚಿತ್ತಾರಗಳನ್ನು ಮೂಡಿಸಲಾಗಿದೆ. ಮೂರ್ತಿಯ ಕೆಳಗಿರುವ ಲಾಂಛನವು ಕಾಲಕ್ರಮೇಣ ಸವೆದು ಅಸ್ಪಷ್ಟವಾಗಿರುವುದರಿಂದ, ಇದು ನಿರ್ದಿಷ್ಟವಾಗಿ ಯಾವ ತೀರ್ಥಂಕರರ ಮೂರ್ತಿ ಎಂಬುದನ್ನು ಇತಿಹಾಸಕಾರರಿಗೆ ಇನ್ನೂ ಖಚಿತಪಡಿಸಲು ಸಾಧ್ಯವಾಗಿಲ್ಲ.
PublicNext
07/06/2026 09:21 am
LOADING...