ತಿರುವನಂತಪುರಂ: ಕೇರಳದಲ್ಲಿ ಮತ್ತೊಂದು ಮಾರಣಾಂತಿಕ ಶಿಗೆಲ್ಲಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಸೋಂಕು ಈಗಾಗಲೇ 4 ವರ್ಷದ ಮಗುವಿನ ಪ್ರಾಣವನ್ನು ಬಲಿಪಡೆದಿದ್ದು, 440ಕ್ಕೂ ಹೆಚ್ಚು ಜನರಲ್ಲಿ ಪತ್ತೆಯಾಗಿದೆ ಎನ್ನಲಾಗುತ್ತಿದೆ.
ಶಿಗೆಲ್ಲಾ ಸೋಂಕು ಕೇರಳದ ವಯನಾಡ್ ಮತ್ತು ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿದೆ. ನಿರ್ದಿಷ್ಟವಾಗಿ, ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿ ವ್ಯಾಪ್ತಿಯ ನೆನ್ಮೇನಿ ಪಂಚಾಯತ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಜಂಟಿಯಾಗಿ 'ಹೈ ಅಲರ್ಟ್' ಘೋಷಿಸಿದ್ದು, ಪರಿಸ್ಥಿತಿ ನಿಭಾಯಿಸಲು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ. ನೂರಾರು ಜನರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿರುವುದರಿಂದ, ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಕಳೆದ ವಾರ ಸುಲ್ತಾನ್ ಬತ್ತೇರಿಯ ಶಾಲೆಯೊಂದರ ವಿದ್ಯಾರ್ಥಿಗಳಲ್ಲಿ ವಾಂತಿ, ಭೇದಿ ಮತ್ತು ಜ್ವರದಂತಹ ಲಕ್ಷಣಗಳು ಕಾಣಿಸಿಕೊಂಡಾಗ ಈ ಸೋಂಕು ಮೊದಲ ಬಾರಿಗೆ ಬೆಳಕಿಗೆ ಬಂದಿತು. ವೈದ್ಯಕೀಯ ತಪಾಸಣೆಯಲ್ಲಿ ಇಬ್ಬರು ಮಕ್ಕಳಿಗೆ ಶಿಗೆಲ್ಲಾ ಸೋಂಕು ಇರುವುದು ದೃಢಪಟ್ಟ ನಂತರ, ಪ್ರಕರಣದ ಗಂಭೀರತೆ ಅರಿವಿಗೆ ಬಂದಿದೆ.
ಸೋಂಕು ದೃಢಪಟ್ಟ ನಂತರ, 337 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 443 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ 68 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ 26 ಮಂದಿ ಬತ್ತೇರಿ ತಾಲೂಕು ಆಸ್ಪತ್ರೆಯಲ್ಲಿದ್ದರೆ, ಉಳಿದ 42 ಮಂದಿ ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ, 14 ಜನರಲ್ಲಿ ಹೊಸದಾಗಿ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯು ಒಟ್ಟು 163 ಜನರನ್ನು ತೀವ್ರ ನಿಗಾದಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದೆ.
ಸೋಂಕು ಮತ್ತಷ್ಟು ಹರಡದಂತೆ ತಡೆಯಲು ಸರ್ಕಾರವು ಶಾಲೆಗಳು, ಆಸ್ಪತ್ರೆಗಳು ಮತ್ತು ಮನೆಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಿದೆ. ಕೆಲವು ಮಕ್ಕಳಲ್ಲಿ ರೋಗಲಕ್ಷಣಗಳು ಮರುಕಳಿಸುತ್ತಿರುವುದು ಕಂಡುಬಂದಿದ್ದು, ಅವರನ್ನು ಆಸ್ಪತ್ರೆಗಳಿಗೆ ಮರು ದಾಖಲಿಸಲಾಗುತ್ತಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳ ದಾಸ್ತಾನನ್ನು ಖಚಿತಪಡಿಸಿಕೊಳ್ಳಲು ಆದೇಶಿಸಲಾಗಿದೆ.
PublicNext
09/06/2026 05:12 pm