ಹರಿಯಾಣದ ಹನ್ಸಿಯಲ್ಲಿ ಗುರುವಾರ ಹಾಡಹಗಲೇ ಭೀಕರ ಕೊಲೆಯೊಂದು ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ, ಯುವಕ-ಯುವತಿಯರ ಕಣ್ಣೆದುರೇ ಜಿಮ್ ಮಾಲೀಕರೊಬ್ಬರನ್ನು ಅಪರಿಚಿತ ಬೈಕ್ ಸವಾರರು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಹೌದು ಹನ್ಸಿಯ ಫವ್ವಾರಾ ಚೌಕ್ ಬಳಿ ಈ ರಕ್ತಸಿಕ್ತ ಘಟನೆ ನಡೆದಿದೆ. ಹತ್ಯೆಗೀಡಾದ ಜಿಮ್ ಮಾಲೀಕರು ಯುವಕ-ಯುವತಿಯರ ಗುಂಪಿಗೆ ಹೊರಾಂಗಣದಲ್ಲಿ (outdoor) ವರ್ಕೌಟ್ ತರಬೇತಿ ನೀಡುತ್ತಿದ್ದರು. ಎಲ್ಲರೂ ಕಸರತ್ತಿನಲ್ಲಿ ನಿರತರಾಗಿದ್ದಾಗಲೇ, ಇದ್ದಕ್ಕಿದ್ದಂತೆ ಅಲ್ಲಿಗೆ ನುಗ್ಗಿದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.
ಈ ದಾಳಿಯ ಭೀಕರ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಸಿಸಿಟಿವಿ ದೃಶ್ಯಾವಳಿಯ ಪ್ರಕಾರ, ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಜಿಮ್ ಮಾಲೀಕರ ಬಳಿ ಬಂದು ದಿಢೀರನೆ ಪಿಸ್ತೂಲ್‌ನಿಂದ ಮನಸೋಇಚ್ಛೆ ಗುಂಡು ಹಾರಿಸಿದ್ದಾರೆ. ರಕ್ತದ ಮಡುವಿನಲ್ಲಿ ಕುಸಿದುಬಿದ್ದ ಜಿಮ್ ಮಾಲೀಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹತ್ಯೆಗೈದ ನಂತರ, ಹಂತಕರು ಬೈಕ್ ಹತ್ತಿ ಕ್ಷಣಾರ್ಧದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸುತ್ತಮುತ್ತಲಿದ್ದ ಯುವಕ-ಯುವತಿಯರು ತಮ್ಮ ಕಣ್ಣೆದುರೇ ನಡೆದ ಈ ಭೀಕರ ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಹಂತಕರ ಪತ್ತೆಗಾಗಿ ವ್ಯಾಪಕ ಜಾಲ ಬೀಸಿದ್ದಾರೆ.
PublicNext
11/06/2026 12:27 pm
LOADING...