ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಸಮೀಪದ ಹುಳಂದ ಗ್ರಾಮದಲ್ಲಿ ಯುವ ರೈತನೊಬ್ಬನ ಮೇಲೆ ಕರಡಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ.
ಹುಳಂದ ಗ್ರಾಮದ ನಿವಾಸಿ ಮಹೇಶ್ ಗಾವಡೆ (25) ಎಂಬುವವರೇ ಕರಡಿ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿರುವ ದುರ್ದೈವಿ ರೈತರಾಗಿದ್ದಾರೆ. ಮಹೇಶ್ ಅವರು ಎಂದಿನಂತೆ ತಮ್ಮ ಹಸುವನ್ನು ಮೇಯಿಸಲು ಗ್ರಾಮದ ಸಮೀಪದ ಅರಣ್ಯ ಪ್ರದೇಶಕ್ಕೆ ತೆರಳಿದ್ದರು.
ದಿನವಿಡೀ ದನ ಮೇಯಿಸಿ, ಸಂಜೆ ವೇಳೆಗೆ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಪೊದೆಯೊಳಗಿಂದ ಏಕಾಏಕಿ ಬಂದ ಕರಡಿಯೊಂದು ಇವರ ಮೇಲೆರಗಿದೆ.
ಕರಡಿಯಿಂದ ತನ್ನ ಪ್ರಾಣ ಉಳಿಸಿಕೊಳ್ಳಲು ಮಹೇಶ್ ಅವರು ತಕ್ಷಣವೇ ಸಮೀಪದಲ್ಲಿದ್ದ ಮರವನ್ನು ಹತ್ತಲು ಪ್ರಯತ್ನಿಸಿದ್ದಾರೆ. ಆದರೆ ಬಿಡದ ಕರಡಿ ಅವರನ್ನು ಹಿಂಬಾಲಿಸಿ, ಮರ ಹತ್ತುವಷ್ಟರಲ್ಲೇ ಕಾಲನ್ನು ಗಟ್ಟಿಯಾಗಿ ಕಚ್ಚಿ ಎಳೆದಿದೆ. ಕರಡಿಯ ಭೀಕರ ದಾಳಿಯಿಂದಾಗಿ ಮಹೇಶ್ ಅವರ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ತಕ್ಷಣವೇ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಯುವ ರೈತ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ಅರಣ್ಯ ಪ್ರದೇಶದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗುತ್ತಿರುವುದು ಸ್ಥಳೀಯ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.
PublicNext
11/06/2026 01:26 pm
LOADING...