ಗುರುಗ್ರಾಮ: ಕಾನೂನು ರಕ್ಷಿಸಬೇಕಾದ ದೆಹಲಿ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬ ನಡುರಸ್ತೆಯಲ್ಲೇ ಮಾಜಿ ಪ್ರೇಯಸಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿ, ಬಿಡಿಸಲು ಬಂದ ಸಾರ್ವಜನಿಕರ ಮೇಲೂ ದರ್ಪ ತೋರಿರುವ ಆಘಾತಕಾರಿ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸದ್ಯ ಆರೋಪಿ ಪೊಲೀಸನನ್ನು ಬಂಧಿಸಲಾಗಿದೆ. ನ್ಯಾಯಾಲಯವು ಆತನ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ಘಾಜಿಯಾಬಾದ್ ಮೂಲದ ರೋನಿತ್ ಯಾದವ್ ಎಂದು ಗುರುತಿಸಲಾಗಿದ್ದು, ಈತ ದೆಹಲಿ ಮೆಟ್ರೋ ನಿಲ್ದಾಣವೊಂದರಲ್ಲಿ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದ.
ಗುರುಗ್ರಾಮದ ಸೆಕ್ಟರ್ 56ರ ಜಲವಾಯು ವಿಹಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗಿರುವ ಸಿಸಿಟಿವಿ ವಿಡಿಯೋದಲ್ಲಿ, ಮದ್ಯದ ಅಮಲಿನಲ್ಲಿದ್ದ ರೋನಿತ್ ಯಾದವ್ ಯುವತಿಯನ್ನು ಸಾರ್ವಜನಿಕವಾಗಿ ಎಳೆದಾಡಿ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿ ಕಂಡಿದೆ. ಈ ವೇಳೆ ಯುವತಿಯ ರಕ್ಷಣೆಗೆ ಬಂದ ಸಾರ್ವಜನಿಕರೊಂದಿಗೂ ಆತ ಗಲಾಟೆ ಮಾಡಿ, ದಾಂಧಲೆ ಎಬ್ಬಿಸಿದ್ದಾನೆ.
ಬಾಧಿತ ಯುವತಿ ದೆಹಲಿಯ ಕಾಲೇಜೊಂದರಲ್ಲಿ ಬಿಬಿಎ (BBA) ವಿದ್ಯಾರ್ಥಿನಿಯಾಗಿದ್ದು, ಈ ಹಿಂದೆ ಇಬ್ಬರ ನಡುವೆ ಪ್ರೇಮ ಸಂಬಂಧವಿತ್ತು. ಆದರೆ ಆತನ ನಡವಳಿಕೆ ಸರಿಯಿಲ್ಲದ ಕಾರಣ ಯುವತಿ ಬ್ರೇಕಪ್ ಮಾಡಿಕೊಂಡಿದ್ದಳು. ಇದರಿಂದ ಕೆರಳಿದ ಪೇದೆ ರೋನಿತ್, ಘಟನೆ ನಡೆದ ದಿನ ಮುಂಜಾನೆ 5 ಗಂಟೆ ಸುಮಾರಿಗೆ ಯುವತಿಯ ಮನೆಗೆ ನುಗ್ಗಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ, ಮನೆಯಲ್ಲಿದ್ದ ಆಕೆಯ ತಾಯಿ ಮತ್ತು ಅಪ್ರಾಪ್ತ ತಂಗಿಗೂ ಪ್ರಾಣ ಬೆದರಿಕೆ ಹಾಕಿದ್ದಾನೆ.
"ಆ ಸಮಯದಲ್ಲಿ ನಾನು ಸಮಾರಂಭವೊಂದಕ್ಕೆ ಹೋಗಿದ್ದೆ. ನನ್ನ ತಾಯಿ ಫೋನ್ ಮಾಡಿ ವಿಷಯ ತಿಳಿಸಿದರು. ಅಷ್ಟರಲ್ಲೇ ಆತ ತನ್ನ ‘ಥಾರ್’ ಎಸ್‌ಯುವಿ (Thar SUV) ಕಾರನ್ನು ನಮ್ಮ ವಸತಿ ಸಂಕೀರ್ಣದ (Society) ಮುಖ್ಯ ಗೇಟ್‌ಗೆ ಜೋರಾಗಿ ಡಿಕ್ಕಿ ಹೊಡೆಸಿ ಜಖಂಗೊಳಿಸಿದ್ದಾನೆ. ಆ ನಂತರ ಸಿಕ್ಕ ಸಿಕ್ಕ ಕಡೆ ನನ್ನನ್ನು ಹುಡುಕಿ ಹಲ್ಲೆ ಮಾಡಿದ್ದಾನೆ."
ಕಳೆದ ವರ್ಷ (ಸೆಪ್ಟೆಂಬರ್ 2025) ಕೂಡ ಈತ ತನ್ನ ಮೇಲೆ ಹಲ್ಲೆ ಮಾಡಿದ್ದ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಅಂದು ಪೊಲೀಸರಿಗೆ ದೂರು ನೀಡಿದ್ದರೂ, ಆತ ಮತ್ತು ಆತನ ಕಡೆಯವರು ಜೀವ ಬೆದರಿಕೆ ಹಾಕಿದ್ದರಿಂದ ಹೆದರಿ ದೂರನ್ನು ವಾಪಸ್ ಪಡೆದುಕೊಂಡಿದ್ದಾಗಿ ಯುವತಿ ಅಳಲು ತೋಡಿಕೊಂಡಿದ್ದಾಳೆ. ಸದ್ಯ ಗುರುಗ್ರಾಮ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಕಂಬಿ ಹಿಂದೆ ತಳ್ಳಿದ್ದಾರೆ.
PublicNext
11/06/2026 09:00 pm