ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಹಾಗೂ ಬಡವರ ಬಂಧು ಆಸ್ಪತ್ರೆಯಾಗಿ ಹೆಸರುವಾಸಿಯಾಗಿರುವ ಕೆಎಂಸಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ-ಗ್ರೂಪ್ ಸಿಬ್ಬಂದಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಸಂಬಂಧಿಸಿದ ಏಜೆನ್ಸಿಯಿಂದ ಪಿಎಫ್ (PF), ಇಎಸ್‌ಐ (ESI), ಸಮರ್ಪಕ ವೇತನ ಹಾಗೂ ಇತರೆ ಕಾನೂನುಬದ್ಧ ಸೌಲಭ್ಯಗಳು ಸರಿಯಾಗಿ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇದರಿಂದ ಸಿಬ್ಬಂದಿ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ಸಿಬ್ಬಂದಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದರೂ, ಯಾವುದೇ ಕ್ರಮ ಕೈಗೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ವಿಷಾದನೀಯವಾಗಿದೆ.
ಇಂತಹ ಪ್ರತಿಷ್ಠಿತ ಆಸ್ಪತ್ರೆಯ ಸ್ವಚ್ಛತೆ ಮತ್ತು ನಿರ್ವಹಣೆಯಲ್ಲಿ ಡಿ-ಗ್ರೂಪ್ ಸಿಬ್ಬಂದಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ಆಸ್ಪತ್ರೆಯ ಪರಿಸ್ಥಿತಿ ಹೇಗಾಗಬಹುದು ಎಂಬುದನ್ನು ಸುಲಭವಾಗಿ ಊಹಿಸಲು ಅಸಾಧ್ಯವಾಗಿದೆ.
ಸಿಬ್ಬಂದಿ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ಸಫಾಯಿ ಕರ್ಮಚಾರಿ ಸಂಘದ ಜಿಲ್ಲಾಧ್ಯಕ್ಷರಾದ ಪ್ರಕಾಶ್ ಹುಬ್ಬಳ್ಳಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ನಿರ್ದೇಶಕರಾದ ಎಚ್.ಎಫ್. ಕಮ್ಮಾರ ಅವರನ್ನು ಭೇಟಿ ಮಾಡಿ ಸಿಬ್ಬಂದಿಗಳ ಸಮಸ್ಯೆಗಳ ಕುರಿತು ವಿಚಾರಿಸಿದರು.
ಸಿಬ್ಬಂದಿಗೆ ಸರಿಯಾದ ವೇತನ, ಪಿಎಫ್, ಇಎಸ್‌ಐ ಸೇರಿದಂತೆ ಕಾನೂನುಬದ್ಧವಾಗಿ ದೊರೆಯಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/06/2026 04:23 pm
LOADING...