ಹುಬ್ಬಳ್ಳಿ: ಇಷ್ಟದ ವಸ್ತುಗಳು ಹೋಮ್ ಡೆಲಿವರಿ ಆಗುವುದು ನಾವೆಲ್ಲರೂ ನೋಡಿದ್ದೇವೆ. ಆದರೆ ಈಗ ಜೀವ ಉಳಿಸುವ ರಕ್ತವೂ ಕೂಡ ನಿಮಗೆ ರಕ್ತದ ಅವಶ್ಯಕತೆಯಿದ್ದಲ್ಲಿ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಸಾಕು, ರೋಗಿಗಳು ದಾಖಲಾಗಿರುವ ಆಸ್ಪತ್ರೆಗೆ ರಕ್ತದ ಪ್ಯಾಕೆಟ್ ಪೂರೈಸಲಾಗುತ್ತದೆ. ಇಂತಹದೊಂದು ಕಾರ್ಯಕ್ಕೆ ಡಾ.ವಿ.ಎಸ್.ವಿ ಪ್ರಸಾದ್ ಬೆಂಬಲ ನೀಡಿದ್ದಾರೆ.
ಕಳೆದ ಆರು ತಿಂಗಳಿನಿಂದ ಹುಬ್ಬಳ್ಳಿಯ ಶಾ ದಾಮಜಿ ಜಾಧವಜಿ ಛೇಡಾ ಮೊಮೋರಿಯಲ್ ರಾಷ್ಟೋತ್ಥಾನ ರಕ್ತ ಕೇಂದ್ರವು 'ರಕ್ತದೂತ ಹೆಸರಿನಲ್ಲಿ ಈ ವಿನೂತನ ಸೇವೆ ಆರಂಭಿಸಿದೆ. ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಸಂದರ್ಭ, ಕ್ಯಾನ್ಸರ್ ಹಾಗೂ ರಕ್ತ ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗೆ ರಕ್ತದ ಅಗತ್ಯವಿರುತ್ತದೆ. ರೋಗಿಗಳೊಂದಿಗೆ ಅವರ ಆರೈಕೆಗಾಗಿ ಒಬ್ಬರೇ ಇರುತ್ತಾರೆ. ತುರ್ತು ಸಂದರ್ಭದಲ್ಲಿ ರೋಗಿಯನ್ನು ಬಿಟ್ಟು ರಕ್ತ ತರಲು ಆಸ್ಪತ್ರೆಯಿಂದ ಹೊರಬರದಂತಹ ಸ್ಥಿತಿ ಇರುತ್ತದೆ. ಇಂತಹ ವೇಳೆ 9353623822 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಸಾಕು ರಕ್ತದ ಪ್ಯಾಕೆಟ್ ತಂದು ಕೊಡಲಾಗುತ್ತದೆ.
ಹುಬ್ಬಳ್ಳಿಯ ನಿಲಿಜಿನ್ ರಸ್ತೆಯಲ್ಲಿ ರಾಷ್ಟೋತ್ಥಾನ ರಕ್ತ ಕೇಂದ್ರವು 2010ರಲ್ಲಿ ಆರಂಭವಾಗಿದ್ದು, ರಕ್ತ ಸಂಗ್ರಹಿಸುವ ಜೊತೆಗೆ ರಕ್ತದಾನದ ಅರಿವು ಮೂಡಿಸುತ್ತಿದೆ. 16 ವರ್ಷಗಳಲ್ಲಿ ಒಟ್ಟು 2213 ಕಡೆ ರಕ್ತದಾನ ಶಿಬಿರ ನಡೆಸಿ 96,799 ಯುನಿಟ್ ರಕ್ತ ಸಂಗ್ರಹಿಸಿದೆ. 1,56,524 ಯುನಿಟ್ ರಕ್ತವನ್ನು ಅವಶ್ಯಕತೆ ಇರುವ ರೋಗಿಗಳಿಗೆ ನೀಡಿದೆ. ಜೊತೆಗೆ ಗೋದಾವರಿ, ಗಂಗಾ, ತುಂಗಭದ್ರಾ ಹೆಸರಿನ ರಕ್ತ ಸಂಗ್ರಹಣಾ ವಾಹನಗಳು ಹು-ಧಾ ನಗರದಾದ್ಯಂತ ಸಂಚರಿಸಿ ರಕ್ತ ಸಂಗ್ರಹಿಸುತ್ತವೆ.
2025ರ ನ.15ರಂದು 'ರಕ್ತದೂತ' ಹೆಸರಿನಲ್ಲಿ ವಿನೂತನ ಸೇವೆ ಪ್ರಾರಂಭಿಸಿದ್ದು, ರಕ್ತದ ಅವಶ್ಯಕತೆ ಇರುವವರು 9353623822 ಸಂಖ್ಯೆಗೆ ಕರೆ ಮಾಡಿದರೆ ರೋಗಿಗಳು ದಾಖಲಾಗಿರುವ ಆಸ್ಪತ್ರೆಗೆ ಆಗಮಿಸುವ ಬೈಕ್ ರೋಗಿಗಳ ರಕ್ತದ ಮಾದರಿ ಸಂಗ್ರಹಿಸಿಕೊಂಡು ರಕ್ತ ಕೇಂದ್ರಕ್ಕೆ ತೆರಳಲಿದೆ. ಅಲ್ಲಿ ರಕ್ತದ ಪರೀಕ್ಷೆ ಮಾಡಿ ಬಳಿಕ ಆಸ್ಪತ್ರೆಗೆ ತೆರಳಿ ರೋಗಿಗಳ ಕಡೆಯವರಿಗೆ ರಕ್ತದ ಪ್ಯಾಕೆಟ್ ನೀಡಲಿದೆ. ಈ ವಾಹನದ ಹಿಂದೆ ಐಸ್ ಕ್ಯೂಬ್‌ಗಳಿರುವ ವಿಶೇಷ ಬಾಕ್ಸ್ ಇರಲಿದೆ. ಇದರಲ್ಲಿಯೇ ರಕ್ತದ ಮಾದರಿ ಹಾಗೂ ರಕ್ತದ ಪ್ಯಾಕೆಟ್ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲಾಗುತ್ತದೆ.
6 ತಿಂಗಳಲ್ಲಿ 200ಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ಒದಗಿಸಿರುವುದು ವಿಶೇಷ. ರಕ್ತದ ಪ್ಯಾಕೆಟ್ ಪೂರೈಕೆಗೆ ನಿಗದಿತ ದರಕ್ಕಿಂತ ₹100 ಮಾತ್ರ ಹೆಚ್ಚುವರಿ ಪಡೆದುಕೊಳ್ಳಲಾಗುತ್ತಿದೆ. ರಕ್ತದೂತ ವಾಹನವನ್ನು ರಾಷ್ಟೋತ್ಥಾನ ಕೇಂದ್ರಕ್ಕೆ ಸ್ವರ್ಣಾ ಗ್ರೂಪ್‌ನ ಮಾಲೀಕ ವಿಎಸ್‌ವಿ ಪ್ರಸಾದ್ ಅವರು ದೇಣಿಗೆಯಾಗಿ ನೀಡಿದ್ದಾರೆ. ಈ ಮೂಲಕ ಮಾದರಿ ಕೆಲಸಕ್ಕೆ ಸಾಥ್ ನೀಡಿದ್ದಾರೆ.
ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/06/2026 01:21 pm