ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದಂತೆ ಅವಾಂತರಗಳು ಅಷ್ಟೇ ಆಗುತ್ತಿವೆ. ಕೋರ್ಟ್ ಸರ್ಕಲ್ ಬಳಿ ಎಎಸ್‌ಐ ಪೊಲೀಸ್ ತಲೆ ಮೇಲೆ ಕಬ್ಬಿಣದ ರಾಡ್ ಬಿದ್ದು ಸಾವನ್ನಪ್ಪಿದ್ದರು. ಈಗ ಮತ್ತೆ ಅದೇ ರೀತಿ ಹೊಸೂರು ಸರ್ಕಲ್ ಬಳಿ ಫ್ಲೈ ಓವರ್ ಮೇಲೆ ನಡೆಯುತ್ತಿರುವ ಕಾಮಗಾರಿಯಿಂದ ಕಬ್ಬಿಣದ ರಾಡ್ ವೃದ್ಧೆಯ ಮೇಲೆ ಬಿದ್ದಿರುವ ಘಟನೆ ನಡೆದಿದೆ.
ಹೌದು, ನಗರದ ಹೊಸೂರು ವೃತ್ತದ ಕೆನರಾ ಹೋಟೆಲ್ ಹತ್ತಿರ ವೃದ್ಧೆಯೊಬ್ಬರು ನಡೆದು ಹೋಗುವಾಗ, ಅವರ ಮೇಲೆ ಮೇಲ್ಸೇತುವೆ ರಾಡ್‌ವೊಂದು ಬಿದ್ದು, ಗಾಯಗೊಂಡಿದ್ದಾರೆ. ಹಾವೇರಿಯ ಯಶೋಧಾ ಜಾದವ್ ಗಾಯಗೊಂಡ ಅಜ್ಜಿ. ಹಾವೇರಿಯಿಂದ ನವನಗರದಲ್ಲಿರುವ ಮಗಳ ಮನೆಗೆ ಹೋಗಲು ಹುಬ್ಬಳ್ಳಿಗೆ ಬಂದಿದ್ದರು. ಹೊಸೂರು ವೃತ್ತದ ಬಸ್‌ನಿಲ್ದಾಣದಿಂದ ನವನಗರ ಬಸ್ ಹತ್ತಲು ಹೋಗುವಾಗ ಮೇಲ್ಸೇತುವೆ ಮೇಲಿಂದ ರಾಡ್ ಬಿದ್ದು, ಮೂಗಿನ ಮೇಲೆ ಗಾಯವಾಗಿದೆ. ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನಾಲ್ಕು ಹೊಲಿಗೆ ಬಿದ್ದಿವೆ ಎಂದು ವಿದ್ಯಾನಗರ ಪೊಲೀಸರಿಂದ ಮಾಹಿತಿ ತಿಳಿದು ಬಂದಿದೆ.
ಈ ರೀತಿ ಬೇಜವಾಬ್ದಾರಿಯಿಂದ ಫ್ಲೈ ಓವರ್ ಕಾಮಗಾರಿ ಮಾಡುತ್ತಿದ್ದಾರೆ. ಯಾವುದೇ ರೀತಿ ಮುಂಜಾಗ್ರತಾ ಕ್ರಮ ಕೂಡ ಕೈಗೊಂಡಿಲ್ಲ. ಹೀಗೆ ಮಾಡುತ್ತಿದ್ದರೆ ಇನ್ನೂ ಎಷ್ಟು ಆಘಾತಗಳನ್ನು ನೋಡಬೇಕಾಗುತ್ತದೆಯೋ ದೇವರೇ ಬಲ್ಲ. ಜನ ಪ್ರತಿನಿಧಿಗಳು, ಜಿಲ್ಲಾಡಳಿತ ಕಣ್ಣಿದ್ದು ಕುರುಡರಂತೆ ವರ್ತನೆ ಮಾಡುತ್ತಿದ್ದಾರೆ. ಇವರ ಬೇಜವಾಬ್ದಾರಿಗೆ ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಜನ ಪ್ರತಿನಿಧಿಗಳು, ಅಧಿಕಾರಿಗಳಿಗೆ ಜನರ ಹಿಡಿ ಶಾಪ ಹಾಕುತ್ತಿದ್ದಾರೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/06/2026 07:27 pm
LOADING...