ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮೂರು: ಏಳು ಬಾರಿ ಶಾಸಕರಾಗಿ ಆಯ್ಕೆಯಾದರೂ ಎನ್.ವೈ. ಗೋಪಾಲಕೃಷ್ಣಗೆ ಸಿಗದ ಸಚಿವ ಸ್ಥಾನ; ಬೆಂಬಲಿಗರ ಸಭೆ

ಮೊಳಕಾಲ್ಮೂರು: ಮೊಳಕಾಲ್ಮೂರು ತಾಲೂಕಿನ ರಾಂಪುರ ತೋಟದ ಬಳಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರ ಬೆಂಬಲಿಗರ ಸಭೆ ನಡೆಯಿತು. ಸಭೆಯಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ಶಾಸಕ ಎನ್.ವೈ. ಗೋಪಾಲಕೃಷ್ಣ, ಮೊದಲ ಹಂತದ ಸಚಿವ ಸಂಪುಟ ರಚನೆ ಕುರಿತು ಪರೋಕ್ಷ ವ್ಯಂಗ್ಯವಾಡಿದರು. "ಮಂತ್ರಿ ಮಂಡಲದಲ್ಲಿ ನೋಡಿರುವ ಮುಖಗಳಿಗೆ ಅವಕಾಶ ಕೊಡುತ್ತಾರೆ.

"ನಾನು ಏಳು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಬಳ್ಳಾರಿ, ಕೂಡ್ಲಿಗಿ ಹಾಗೂ ಮೊಳಕಾಲ್ಮೂರು ಕ್ಷೇತ್ರಗಳಲ್ಲಿ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಈ ಕ್ಷೇತ್ರದ ಜನರು ನನಗೆ ಪುನರ್ಜನ್ಮ ನೀಡಿದ್ದಾರೆ. ನಾನು ಸಚಿವನಾಗಿ ಕ್ಷೇತ್ರದ ಅಭಿವೃದ್ಧಿ ಮಾಡಬೇಕೆಂಬ ಉದ್ದೇಶದಿಂದಲೇ ಸಚಿವ ಸ್ಥಾನ ಕೇಳುತ್ತಿದ್ದೇನೆ. ಅಧಿಕಾರದ ಪ್ರದರ್ಶನಕ್ಕಾಗಿ ಅಥವಾ ಪರಿವಾರಕ್ಕಾಗಿ ಅಲ್ಲ" ಎಂದು ಹೇಳಿದರು.

"ನಮ್ಮ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಬಳಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ. ನಾನು ಯಾರ ಕಾಲಿಗೂ ಬಿದ್ದು ಬೇಡಿಕೊಳ್ಳುವ ವ್ಯಕ್ತಿಯಲ್ಲ. ನನ್ನ ಕ್ಷೇತ್ರದ ಜನರ ತಲೆ ತಗ್ಗಿಸುವ ಕೆಲಸವೂ ಮಾಡುವುದಿಲ್ಲ" ಎಂದು ಹೇಳಿದರು.

"ಎಂಎಲ್‌ಸಿ ಚುನಾವಣೆಯ ನಂತರ ಹೈಕಮಾಂಡ್, ನಾಯಕರಿಗೆ ನ್ಯಾಯಯುತವಾಗಿ ನಮ್ಮ ಹಕ್ಕಿನ ಬಗ್ಗೆ ಮನವಿ ಮಾಡೋಣ. ಅವರು ಅವಕಾಶ ನೀಡಿದರೆ ಸರಿ, ಇಲ್ಲದಿದ್ದರೆ ಮುಂದಿನ ತೀರ್ಮಾನದ ಬಗ್ಗೆ ಚರ್ಚಿಸೋಣ" ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಪಕ್ಷಕ್ಕಾಗಿ ತಾವು ನೀಡಿರುವ ಕೊಡುಗೆಯನ್ನು ಸ್ಮರಿಸಿದ ಅವರು, "1997ರಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಭಾರತ್ ಜೋಡೋ ಯಾತ್ರೆ ಸೇರಿದಂತೆ ಹಲವು ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೇನೆ. ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಸತ್ಯ, ಧರ್ಮ ಮತ್ತು ಕಾಂಗ್ರೆಸ್‌ನಲ್ಲಿ ನ್ಯಾಯ ಇದ್ದರೆ ನನಗೆ ನ್ಯಾಯ ದೊರಕಿಸಿಕೊಡಲಿ" ನಾನು ರಾಜಕೀಯ ನಿವೃತ್ತಿ ಆದರೂ ಕೂಡ ಯಾರ ಕಾಲಿಗೂ ಬೀಳುವುದಿಲ್ಲ, ನಾನು ರಾಜಕಾರಣಿ. ಸನ್ಯಾಸಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನನಗೆ ಸಚಿವ ಸ್ಥಾನ ಸಿಗುವ ಬಗ್ಗೆ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಬಂದಿದೆ. ನಮ್ಮ ಆಸೆಗಳನ್ನು ಜೀವಂತವಾಗಿಟ್ಟುಕೊಂಡು ಸಮಾಧಾನದಿಂದ ಮುಂದುವರಿಯೋಣ" ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.

Edited By :
PublicNext

PublicNext

13/06/2026 07:58 am

Cinque Terre

11.68 K

Cinque Terre

0

ಸಂಬಂಧಿತ ಸುದ್ದಿ