ಚಿತ್ರದುರ್ಗ: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ನಡುವೆ ಮೊದಲ ಹಂತದಲ್ಲಿ 13 ಮಂದಿ ಹಿರಿಯ ಶಾಸಕರಿಗೆ ಮಂತ್ರಿ ಸ್ಥಾನ ದಕ್ಕಿದ್ದು, ಖಾತೆ ಕೂಡಾ ಹಂಚಿಕೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಮಂತ್ರಿ ಮಂಡಲ ವಿಸ್ತರಣೆಗೆ ಪಟ್ಟಿ ಸಿದ್ದವಾಗ್ತಿದ್ದು, ಎರಡನೇ ಹಂತದಲ್ಲಿ ಶತಾಯಗತಾಯ ಮಂತ್ರಿಗಿರಿ ಪಡೆಯಲು ಶಾಸಕರು ಭಾರಿ ಲಾಬಿ ಆರಂಭಿಸಿದ್ದಾರೆ. ಈ ನಡುವೆ ಕೋಟೆನಾಡು ಚಿತ್ರದುರ್ಗದಲ್ಲಿ ಹಾಲಿ ಇಬ್ಬರು ಕಾಂಗ್ರೆಸ್ ಶಾಸಕರ ಮಧ್ಯೆ ಮಂತ್ರಿಸ್ಥಾನಕ್ಕೆ ಪೈಪೋಟಿ ಆರಂಭವಾಗಿದ್ದು, ತೆರೆಮರೆಯಲ್ಲಿ ಮಂತ್ರಿಗಿರಿ ಪಡೆಯಲು ಸರ್ಕಸ್ ನಡೆಸುತ್ತಿದ್ದಾರೆ.
ಸತತ ಮೂರು ಬಾರಿ ಗೆದ್ದಿರುವ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸಚಿವಾಕಾಂಕ್ಷಿಯಾಗಿದ್ದು, ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಂತ್ರಿಗಿರಿಗೆ ಲಾಬಿ ನಡೆಸುತ್ತಿದ್ದಾರೆ.
ಅಲ್ಲದೇ ವಾಲ್ಮೀಕಿ ಕೋಟಾದಡಿ ಸಚಿವ ಸ್ಥಾನಕ್ಕೆ ಶಾಸಕ ಟಿ.ರಘುಮೂರ್ತಿ ಪಟ್ಟು ಹಿಡಿದಿದ್ದು, ಸಚಿವ ಸ್ಥಾನಕ್ಕಾಗಿ ಭರ್ಜರಿ ಸರ್ಕಸ್ ಮಾಡ್ತಿದ್ದಾರೆ. ಈ ನಡುವೆ ಕಳೆದ ಎರಡು ದಿನಗಳ ಹಿಂದೆ ಅಭಿಮಾನಿಗಳು ಭರ್ಜರಿ ಹುಟ್ಟುಹಬ್ಬ ಆಚರಣೆ ಮಾಡಿದ್ದು, ಈ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಇನ್ನೂ ಈ ಬೆನ್ನಲ್ಲೇ ಇಂದು ಮೊಳಕಾಲ್ಮೂರು ಶಾಸಕ ಎನ್.ವೈ ಗೋಪಾಲಕೃಷ್ಣ ಕೂಡಾ ತಮ್ಮ ಬೆಂಬಲಿಗರ ಸಭೆ ನಡೆಸಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಮಂದಿ ಕ್ಷೇತ್ರದ ಮುಖಂಡರ ಸಭೆ ನಡೆಸಿರುವ ಎನ್.ವೈ.ಜಿ ಮಂತ್ರಿಗಿರಿಗೆ ಒತ್ತಡ ಹೇರಲು ಮುಂದಾಗಿದ್ದಾರೆ. ಏಳು ಬಾರಿ ಶಾಸಕರಾಗಿರುವ ಎನ್.ವೈ. ಗೋಪಾಲಕೃಷ್ಣ ರಾಜ್ಯದ ಟಾಪ್ ಐವರು ಹಿರಿಯರಲ್ಲಿ ಒಬ್ಬರಾಗಿದ್ದಾರೆ. ಮಧ್ಯ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಬಾರಿ ಗೆದ್ದಿರುವ ಎನ್.ವೈ.ಜಿ ಹಿರಿತನದ ಆಧಾರದಲ್ಲಿ ಮಂತ್ರಿಗಿರಿಗೆ ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಮಂತ್ರಿ ಸ್ಥಾನ ಸಿಗದೇ ಹೋದರೇ ಮುಂದಿನ ನಡೆಯ ಕುರಿತು ಬೆಂಬಲಿಗರ ಜೊತೆ ಮತ್ತೆ ಸಭೆ ನಡೆಸಿ ತೀರ್ಮಾನ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ ಎರಡನೇ ಹಂತದ ಮಂತ್ರಿ ಮಂಡಲ ವಿಸ್ತರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಪ್ಲಾನ್ ರೂಪಿಸಿದ್ದಾರೆ. ಆದ್ರೆ ಕೋಟೆನಾಡಲ್ಲಿ ಸೀನಿಯರ್ ಹಾಗೂ ಜ್ಯೂನಿಯರ್ ಶಾಸಕರ ನಡುವೆ ಮಂತ್ರಿ ಸ್ಥಾನಕ್ಕಾಗಿ ಬಿಗ್ ಫೈಟ್ ಆರಂಭವಾಗಿದೆ. ಆದ್ರೆ ಹೈಕಮಾಂಡ್ ನಾಯಕರು ಯಾರಿಗೆ ಮಣೆ ಹಾಕುತ್ತಾರೆ ಅನ್ನೋದನ್ನು ನೋಡಬೇಕಿದೆ.
PublicNext
13/06/2026 01:03 pm