ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಬಳಿ ಕಾರಿಗೆ ಸ್ಕೂಟರ್ ಡಿಕ್ಕಿಯಾಗಿ ಸ್ಕೂಟರ್ ಸವಾರ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಮೃತ ಸವಾರನನ್ನು ಮುಲ್ಕಿ ಸಮೀಪದ ಕಕ್ವ ನಿವಾಸಿ ಶಶಿಕುಮಾರ್ (26) ಗುರುತಿಸಲಾಗಿದೆ. ಮೃತ ಸವಾರ ಶಶಿಕುಮಾರ್ ತಮ್ಮ ಸ್ಕೂಟರ್ (ಕೆ ಎ 19ಎಚ್ ಬಿ 7222) ನಲ್ಲಿ ಮುಲ್ಕಿ ಮಾರ್ಕೆಟ್ ರಸ್ತೆಯಿಂದ ಹೆದ್ದಾರಿ ಕ್ರಾಸ್ ಮಾಡುತ್ತಿರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು(ಕೆ ಎಲ್ 14 ಎ ಎಫ್ 5636) ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಕಾರು ಸ್ಕೂಟರನ್ನು ಎಳೆದುಕೊಂಡು ಹೋಗಿದ್ದು , ಸ್ಕೂಟರ್ ಸವಾರನ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ಈ ಸಂದರ್ಭ ಸ್ಥಳದಲ್ಲಿದ್ದ ಕಿಶೋರ್ ಶೆಟ್ಟಿ ದೆಪ್ಪುಣಿ ಗುತ್ತು, ಪ್ರಸಾದ್ ಪೂಜಾರಿ, ಗಣೇಶ್ ಮತ್ತಿತರರು ಸೇರಿಕೊಂಡು ಮಾನವೀಯತೆ ಮೆರೆದು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಮೃತ ಶಶಿಕುಮಾರ್ ರವರು ಪೈಂಟರ್, ಕೃಷಿ ವೃತ್ತಿ ನಡೆಸುತ್ತಿದ್ದ ಎನ್ನಲಾಗಿದ್ದು, ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಶಾರದಾ ರವರ ಪುತ್ರ. ತೀರಾ ಬಡತನದ ಕುಟುಂಬವಾದ ಮೃತ ಶಶಿಕುಮಾರ್ ಮನೆಯಲ್ಲಿ ರೋದನ ಮುಗಿಲು ಮುಟ್ಟಿದ್ದು ಸೂತಕದ ಛಾಯೆ ಮೂಡಿದೆ. ಕಾರ್ ಚಾಲಕ ರಫೀಕ್ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದ ಭೀಕರ ದೃಶ್ಯ ಹೆದ್ದಾರಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಗೊಂಡ ಬಳಿಕ ಹೆದ್ದಾರಿ ಜಂಕ್ಷನ್ ಗಳಾದ ಮುಲ್ಕಿ ಬಸ್ ನಿಲ್ದಾಣ, ಬಪ್ಪನಾಡು ಜಂಕ್ಷನ್, ವಿಜಯ ಸನ್ನಿಧಿ ಬಳಿ ಹೆದ್ದಾರಿ ಅಪಾಯಕಾರಿಯಾಗಿ ಪರಿಣಮಿಸಿದ್ದು ಅನೇಕರು ಪ್ರಾಣ ಕಳೆದುಕೊಂಡಿದ್ದು ಹೆದ್ದಾರಿ ಇಲಾಖೆ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
PublicNext
13/06/2026 12:44 pm
LOADING...