ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರದಿಂದ ಯುರೋಪ್ ರಾಷ್ಟ್ರಗಳಾದ ಫ್ರಾನ್ಸ್ ಮತ್ತು ಸ್ಲೊವಾಕಿಯಾಗೆ ಮಹತ್ವದ ಪ್ರವಾಸ ಕೈಗೊಂಡಿದ್ದಾರೆ. 1993ರಲ್ಲಿ ಸ್ಲೊವಾಕಿಯಾ ಸ್ವತಂತ್ರಗೊಂಡ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು ಈ ಪ್ರವಾಸದ ವಿಶೇಷ.
ಮೋದಿಯವರ ಈ ಪ್ರವಾಸವು ಒಟ್ಟು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲು ಅವರು ಫ್ರಾನ್ಸ್ಗೆ ಭೇಟಿ ನೀಡಲಿದ್ದು, ಬಳಿಕ ಅಲ್ಲಿಂದ ಸ್ಲೊವಾಕಿಯಾಗೆ ತೆರಳಲಿದ್ದಾರೆ. ನಂತರ ಮತ್ತೆ ಫ್ರಾನ್ಸ್‌ಗೆ ಹಿಂದಿರುಗಲಿದ್ದಾರೆ.
ಪ್ರಧಾನಿ ಮೋದಿ ತಮ್ಮ ಫ್ರಾನ್ಸ್ ಪ್ರವಾಸದ ಭಾಗವಾಗಿ ಭಾನುವಾರ ನೈಸ್ ನಗರಕ್ಕೆ ಆಗಮಿಸಲಿದ್ದಾರೆ. ಅಲ್ಲಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಮ್ಯಾಕ್ರನ್ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ, ಉಭಯ ದೇಶಗಳ ಬಾಂಧವ್ಯವನ್ನು "ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ" ಎಂದು ಬಣ್ಣಿಸಲಾಗಿತ್ತು. ಈ ಬಾರಿಯ ಸಭೆಯಲ್ಲಿ, ಉಭಯ ನಾಯಕರು ಎರಡೂ ದೇಶಗಳ ನಡುವಿನ ಒಟ್ಟಾರೆ ಸಂಬಂಧದ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ.
ಇದೇ ವೇಳೆ, ಫ್ರಾನ್ಸ್ ಆಯೋಜಿಸಿರುವ "ಭಾರತ್ ಇನ್ನೋವೇಟ್ಸ್" ಕಾರ್ಯಕ್ರಮವನ್ನು ಇಬ್ಬರೂ ನಾಯಕರು ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮವು ಭಾರತ, ಫ್ರಾನ್ಸ್ ಮತ್ತು ಇತರ ದೇಶಗಳ ಸ್ಟಾರ್ಟ್ಅಪ್‌ಗಳು ಹಾಗೂ ಹೂಡಿಕೆದಾರರನ್ನು ಒಂದೇ ವೇದಿಕೆಗೆ ತರಲಿದೆ. ಇದು ಉಭಯ ದೇಶಗಳ ನಡುವಿನ ತಂತ್ರಜ್ಞಾನ ಸಹಕಾರ ಮತ್ತು ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ.
PublicNext
13/06/2026 03:51 pm