ಇಸ್ಲಾಮಾಬಾದ್: ಯುದ್ಧವನ್ನು ಕೊನೆಗೊಳಿಸುವ ಮಹತ್ವದ ಶಾಂತಿ ಒಪ್ಪಂದಕ್ಕೆ ಮುಂದಿನ 24 ಗಂಟೆಗಳಲ್ಲಿ ಅಮೆರಿಕ ಮತ್ತು ಇರಾನ್ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ತಮ್ಮ ಐದು ಬೇಡಿಕೆಗಳನ್ನು ಒಪ್ಪಿದರೆ ಮಾತ್ರ ಸಂಧಾನಕ್ಕೆ ಸಿದ್ಧ ಎಂದು ಷರತ್ತು ವಿಧಿಸಿದ ಕೆಲವೇ ಗಂಟೆಗಳ ನಂತರ ಪಾಕ್ ಪ್ರಧಾನಿಯಿಂದ ಈ ಮಹತ್ವದ ಹೇಳಿಕೆ ಹೊರಬಿದ್ದಿದೆ.
ಶೆಹಬಾಜ್ ಷರೀಫ್ ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. **"ಉಭಯ ದೇಶಗಳು ಹಿಂದೆಂದಿಗಿಂತಲೂ ಶಾಂತಿ ಒಪ್ಪಂದಕ್ಕೆ ಹತ್ತಿರವಾಗಿವೆ. ಮುಂದಿನ 24 ಗಂಟೆಗಳಲ್ಲಿ ಎರಡೂ ರಾಷ್ಟ್ರಗಳು ಒಪ್ಪಂದವನ್ನು ಅಂತಿಮಗೊಳಿಸಿ ಸಹಿ ಹಾಕುವ ನಿರೀಕ್ಷೆಯಿದೆ. ಅದಕ್ಕಾಗಿ ಪಾಕಿಸ್ತಾನವು ಸಹಿ ಪ್ರಕ್ರಿಯೆಗೆ ತಕ್ಷಣವೇ ತಯಾರಿ ನಡೆಸುತ್ತಿದೆ," ಎಂದು ತಿಳಿಸಿದ್ದಾರೆ.
ಅಲ್ಲದೆ, "ಒಪ್ಪಂದದ ನಂತರ, ಇರಾನ್‌ನ ಪರಮಾಣು ಕಾರ್ಯಕ್ರಮದ ಭವಿಷ್ಯ ಸೇರಿದಂತೆ ಒಪ್ಪಂದದ ವಿವರಗಳನ್ನು ಅಂತಿಮಗೊಳಿಸಲು ಮುಂದಿನ ವಾರ ತಾಂತ್ರಿಕ ಮಟ್ಟದ ಮಾತುಕತೆಗಳು ಪ್ರಾರಂಭವಾಗಲಿವೆ" ಎಂದು ಷರೀಫ್ ಉಲ್ಲೇಖಿಸಿದ್ದಾರೆ. "ಮಾತುಕತೆಗಳ ಸಂದರ್ಭದಲ್ಲಿ ತೋರಿದ ಬದ್ಧತೆಗಾಗಿ ನಾವು ಅಮೆರಿಕ ಮತ್ತು ಇರಾನ್‌ಗೆ ಧನ್ಯವಾದ ಅರ್ಪಿಸುತ್ತೇವೆ. ಜೊತೆಗೆ ಈ ಪ್ರದೇಶದಲ್ಲಿ ಬೆಂಬಲ ವ್ಯಕ್ತಪಡಿಸಿದ ಎಲ್ಲ ಸಹೋದರರಿಗೆ ಪ್ರಾಮಾಣಿಕ ಕೃತಜ್ಞತೆ ಸಲ್ಲಿಸುತ್ತೇವೆ. ಈ ಐತಿಹಾಸಿಕ ಶಾಂತಿ ಒಪ್ಪಂದವು ವಿಶ್ವದ ಶಾಶ್ವತ ಶಾಂತಿಗೆ ಬಲವಾದ ಅಡಿಪಾಯ ಹಾಕಿಕೊಡುತ್ತದೆ ಎಂಬ ವಿಶ್ವಾಸ ನಮಗಿದೆ" ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ತಮ್ಮ ಬೇಡಿಕೆಗಳನ್ನು ಒಪ್ಪಿದರೆ ಮಾತ್ರ ಸಂಧಾನ ಮಾಡಿಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದರು. ಇರಾನ್ ಮತ್ತು ಒಮನ್ ಸಮುದ್ರ ಮಾರ್ಗಗಳ ಮೇಲೆ ಸಂಪೂರ್ಣ ನಿಯಂತ್ರಣ, ಅಲ್ಲಿ ಹಾದುಹೋಗುವ ಹಡಗುಗಳಿಗೆ ಸೆಸ್ ವಿಧಿಸುವುದು, ಹಾರ್ಮುಜ್ ಜಲಸಂಧಿಯಲ್ಲಿ ಕಡಲ ಭದ್ರತೆ ಖಚಿತಪಡಿಸುವುದು, ನೌಕಾ ದಿಗ್ಬಂಧನ ತೆಗೆದುಹಾಕುವುದು ಮತ್ತು ಸ್ಥಗಿತಗೊಂಡಿರುವ ಇರಾನ್ ನಿಧಿಗಳನ್ನು ಬಿಡುಗಡೆಗೊಳಿಸುವುದು ತಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದು ಅವರು ತಿಳಿಸಿದ್ದರು.
ಈ ಇಡೀ ಒಪ್ಪಂದವನ್ನು ಎರಡು ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ ಪರಮಾಣು ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ. ಅದನ್ನು ಸಂಪೂರ್ಣವಾಗಿ ಎರಡನೇ ಹಂತಕ್ಕೆ ಮುಂದೂಡಲಾಗಿದೆ. ಪುಷ್ಟೀಕರಿಸಿದ ಯುರೇನಿಯಂ ಬಗ್ಗೆ ಇರಾನ್‌ನ ನಿಲುವು ಕೂಡ ಸ್ಪಷ್ಟವಾಗಿದೆ. ಯುರೇನಿಯಂನ ಸಾಮರ್ಥ್ಯವನ್ನು ಕಡಿಮೆ ಮಾಡುವ ಅಗತ್ಯವಿದ್ದಲ್ಲಿ, ಅದನ್ನು ಬೇರೆ ಯಾವುದೇ ದೇಶದಲ್ಲಿ ಅಲ್ಲ, ಇರಾನ್‌ನೊಳಗೇ ಮಾಡಲಾಗುತ್ತದೆ ಎಂದು ಅರಘ್ಚಿ ಖಡಾಖಂಡಿತವಾಗಿ ಹೇಳಿದ್ದರು.
ಅಮೆರಿಕವು ಇರಾನ್‌ನ ನಿಧಿಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿದ್ದರೂ, ಅಮೆರಿಕದ ಹಿಂದಿನ ಭರವಸೆಗಳು ಮತ್ತು ಮಾತು ತಪ್ಪಿದ ಇತಿಹಾಸವನ್ನು ಉಲ್ಲೇಖಿಸಿ ಅರಘ್ಚಿ ಎಚ್ಚರಿಕೆ ನೀಡಿದ್ದರು. ಆದ್ದರಿಂದ, ಈ ಕರಡಿನಲ್ಲಿ ಪ್ರಸ್ತಾಪಿಸಲಾದ ಷರತ್ತುಗಳನ್ನು ಒಪ್ಪಿದರಷ್ಟೇ ಸಂಧಾನ ಎಂದು ಅವರು ಒತ್ತಿಹೇಳಿದ್ದರು.
PublicNext
13/06/2026 06:51 pm